ಬೆಂಗಳೂರು: ಉಚಿತ ಮಧುಮೇಹ ಕೇಂದ್ರ ಲೋಕಾರ್ಪಣೆ
ಬೆಂಗಳೂರು, ಫೆ.9: ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದ ಮಧುಮೇಹ ರೋಗಿಗಳಿಗೆ ಉಚಿತ ಹಾಗೂ ಸಾಮಾನ್ಯ ವರ್ಗಕ್ಕೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವಂತಹ ದೀನ್‌ದಯಾಳ್ ಉಪಾಧ್ಯಾಯ ಮಧುಮೇಹ ಕೇಂದ್ರವನ್ನು ಶಾಸಕ ಸುರೇಶ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ಇಲ್ಲಿನ ರಾಜಾಜಿನಗರದ ಹಳೆ ಪೊಲೀಸ್ ಸ್ಟೇಷನ್ ಸರ್ಕಲ್ ಬಳಿ ಮಧುಮೇಹ ಕೇಂದ್ರವಿದ್ದು, ಬಡತನ ರೇಖೆಗಿಂತ ಕಡಿಮೆಯಿರುವ ಕುಟುಂಬದ ಸದಸ್ಯರು ಉಚಿತವಾಗಿ ಹಾಗೂ ಮಧ್ಯಮ ವರ್ಗದವರಿಗೆ ಕೇವಲ 500ರೂ ದರದಲ್ಲಿ ಮಧುಮೇಹ ಚಿಕಿತ್ಸೆ ಪಡೆಯಬಹುದಾಗಿದೆ.
ಈ ವೇಳೆ ಮಾತನಾಡಿದ ಅವರು, ಮಧುಮೇಹ ಕೇಂದ್ರದಲ್ಲಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. 120 ಮಧುಮೇಹಿಗಳ ರಕ್ತದ 21 ಬಗೆಯ ಪರೀಕ್ಷೆಗಳನ್ನು ಒಂದು ಗಂಟೆಯೊಳಗೆ ತಪಾಸಣೆ ನಡೆಸಿ ವರದಿ ನೀಡುವ ಹಾಗೂ ವೇಗವಾಗಿ ಕೆಲಸ ಮಾಡುವ 18ಲಕ್ಷ ರೂ.ಮೌಲ್ಯದ ಯಂತ್ರವನ್ನು ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಸಲದ ಡಯಾಲಿಸಿಸ್‌ಗೆ 18ಸಾವಿರ ಖರ್ಚು ಮಾಡಬೇಕಿತ್ತು. ತಿಂಗಳಿಗೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿದರೆ 36ಸಾವಿರ ರೂ. ವೆಚ್ಚ ಆಗುತ್ತಿತ್ತು. ಇಷ್ಟು ಮೊತ್ತ ಖರ್ಚು ಮಾಡಿ ಬಡ ಕುಟುಂಬದ ರೋಗಿಗಳು ಚಿಕಿತ್ಸೆ ಪಡೆಯಲು ಸಾಧ್ಯವಾಗದೆ, ರೋಗದಿಂದ ನರಳುತ್ತಲೇ ಸಾವಿಗೀಡಾಗುತ್ತಿದ್ದ ಪ್ರಕರಣಗಳು ಸಾಮಾನ್ಯವಾಗಿತ್ತು. ಹೀಗಾಗಿ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಉಚಿತ ಮಧುಮೇಹ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಅದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮನಸನ್ನು ನಿಯಂತ್ರಣದಲ್ಲಿಟ್ಟರೆ ಯಾವುದೆ ರೋಗಗಳು ಬರದಂತೆ ತಡೆಯಬಹುದು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕುವ ಮೂಲಕ ರೋಗಗಳನ್ನು ನಾವಾಗಿಯೇ ಬರಮಾಡಿಕೊಳ್ಳುತ್ತೇವೆ. ಹೀಗಾಗಿ ಶಿಸ್ತು ಬದ್ಧ ಜೀವನ ರೂಪಿಸಿಕೊಂಡು ಆರೋಗ್ಯವಂತರಾಗಿ ಬಾಳಬೇಕೆಂದು ಹೇಳಿದರು. ಈ ವೇಳೆ ಪೀಣ್ಯ ರೋಟರಿ ಅಧ್ಯಕ್ಷ ಬದರಿನಾಥ್, ಮಾಜಿ ಉಪಮೇಯರ್ ರಂಗಣ್ಣ ಮತ್ತಿತರರಿದ್ದರು.







