ಬೆಂಗಳೂರು: ಫೆ.11 ರಂದು ಮೊದಲ ಸರಳ ಸಂಚಾರ ದಿನಾಚರಣೆ
ಬೆಂಗಳೂರು, ಫೆ. 9: ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಹಾಗೂ ನಗರದ ಮಾಲಿನ್ಯ ಪ್ರಮಾಣ ತಗ್ಗಿಸುವ ಹಿನ್ನೆಲೆಯಲ್ಲಿ ಬಿಎಂಟಿಸಿ ವತಿಯಿಂದ ಫೆ.11ರಂದು ಮೊದಲ ಸರಳ ಸಂಚಾರ ದಿನ ಆಚರಣೆ ಮಾಡಲಾಗುತ್ತಿದೆ.
ಈ ಅಭಿಯಾನದ ಮೂಲಕ ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನಗಳನ್ನು ಬದಿಗಿರಿಸಿ ಸಮೂಹ ಸಾರಿಗೆಯನ್ನು ಬಳಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೆ, ಈ ಅಭಿಯಾನವನ್ನು ಪ್ರತಿ ತಿಂಗಳ ಎರಡನೆ ರವಿವಾರದಂದು ಆಚರಣೆ ಮಾಡಲಾಗುತ್ತದೆ. ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ಅಗತ್ಯ ಸಾರಿಗೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜನಸಾಂದ್ರತೆ ಹೆಚ್ಚಿರುವ ಸ್ಥಳಗಳಿಂದ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಹೆಚ್ಚುವರಿ ಸಾರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಅಲ್ಲದೆ, ಅಂದು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 70 ರೂ.ಗಳ ದಿನದ ಪಾಸುಗಳ ದರದಲ್ಲಿ 5 ರೂ.ಯನ್ನು ರಿಯಾಯಿತಿ ನೀಡಿ 65 ರೂ.ಗಳಿಗೆ ಪಾಸ್ ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





