ಸಿಟ್ ತನಿಖೆಗೆ ಕೋರಿ 114 ಸಂಸದರಿಂದ ರಾಷ್ಟ್ರಪತಿ ಭೇಟಿ
ನ್ಯಾ. ಲೋಯಾ ಸಾವು ಪ್ರಕರಣ

ಹೊಸದಿಲ್ಲಿ, ಫೆ. 9: ನ್ಯಾಯಮೂರ್ತಿ ಲೋಯಾ ಸಾವಿನ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖೆ ನಡೆಸುವಂತೆ ಕೋರಿ ಪ್ರತಿಪಕ್ಷದ 114 ಸಂಸದರು ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.
15 ಪಕ್ಷಗಳ 114 ಸಂಸದರು ಮನವಿಗೆ ಸಹಿ ಹಾಕಿದ್ದಾರೆ. ರಾಷ್ಟ್ರಪತಿ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಕುರಿತು ಲೋಕಸಭೆ ಹಾಗೂ ರಾಜ್ಯ ಸಭೆಯ ಹಲವು ಸಂಸದರು ಅಸಮಾಧಾನಗೊಂಡಿದ್ದಾರೆ. ಈ ಪ್ರಕರಣದ ತನಿಖೆ ನಡೆಯಬೇಕು ಹಾಗೂ ಸಿಟ್ ರೂಪಿಸಬೇಕು ಎಂಬುದು ಅವರೆಲ್ಲರ ಅಭಿಪ್ರಾಯ ಎಂದು ರಾಷ್ಟ್ರಪತಿ ಭವನಕ್ಕೆ ನಿಯೋಗದೊಂದಿಗೆ ತೆರಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ವಿಶೇಷ ಸಿಬಿಐ ನ್ಯಾಯಮೂರ್ತಿ ಸಾವಿನ ಸುತ್ತಮುತ್ತಲಿನ ಸನ್ನಿವೇಶದ ಬಗ್ಗೆ ದೇಶದ ಹಲವು ಜನರು ಅನುಮಾನ ಹೊಂದಿದ್ದಾರೆ ಎಂದು ಅವರು ಹೇಳಿದರು. ಸ್ವತಂತ್ರ ತಂಡದ ಮೂಲಕ ಸಮರ್ಪಕ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರಬರಬಹುದು ಎಂಬುದು ನಮ್ಮ ಅಭಿಪ್ರಾಯ ಎಂದು ರಾಹುಲ್ ಗಾಂಧಿ ಹೇಳಿದರು.





