ಉತ್ತರ ಪ್ರದೇಶ, ಬಿಹಾರ : 3 ಲೋಕಸಭಾ ಸ್ಥಾನಗಳಿಗೆ ಮಾ. 11ರಂದು ಉಪಚುನಾವಣೆ

ಹೊಸದಿಲ್ಲಿ, ಫೆ. 9: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರಿಂದ ತೆರವಾದ ಗೋರಖ್‌ಪುರ ಹಾಗೂ ಫೂಲ್‌ಪುರ ಲೋಕಸಭಾ ಸ್ಥಾನಕ್ಕೆ ಉಪ ಚುನಾವಣೆ ಮಾರ್ಚ್ 11ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.
ಆರ್‌ಜೆಡಿ ಸಂಸದ ಮುಹಮ್ಮದ್ ತಸ್ಲಿಮುದ್ದೀನ್ ನಿಧನದಿಂದ ತೆರವಾದ ಬಿಹಾರದ ಅರಾರಿಯಾ ಲೋಕಸಭಾ ಸ್ಥಾನಕ್ಕೆ ಕೂಡಾ ಇದೇ ದಿನ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರಪ್ರದೇಶದ ವಿಧಾನ ಪರಿಷತ್‌ಗೆ ಆಯ್ಕೆಯಾದ ಬಳಿಕ ಆದಿತ್ಯನಾಥ್ ಹಾಗೂ ಮೌರ್ಯ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೌರ್ಯ ಹಾಗೂ ದಿನೇಶ್ ಶರ್ಮಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಕಳೆದ ವರ್ಷ ರಾಜ್ಯ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಎಸ್‌ಪಿ ವರಿಷ್ಠೆ ಮಾಯಾವತಿ ಫೂಲ್‌ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಡಿದೆ. ಆದರೆ, ಬಿಎಸ್‌ಪಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಚುನಾವಣಾ ಫಲಿತಾಂಶ ಉತ್ತರಪ್ರದೇಶದ ಸರಕಾರದ ಜನಪ್ರಿಯತೆ ಮೇಲೆ ಪ್ರಭಾವ ಬೀರಲಿರುವುದರಿಂದ ಈ ಉಪ ಚುನಾವಣೆ ಆದಿತ್ಯನಾಥ್ ಅವರಿಗೆ ಅಗ್ನಿ ಪರೀಕ್ಷೆಯಾಗಿರಲಿದೆ.
ಕಾಂಗ್ರೆಸ್ ಹಾಗೂ ಆರ್‌ಜೆಡಿ ತ್ಯಜಿಸಿ ಬಿಜೆಪಿಯೊಂದಿಗೆ ಕೈಜೋಡಿಸಿದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಈ ಉಪ ಚುನಾವಣೆ ಅತ್ಯಧಿಕ ಪ್ರಾಮಖ್ಯತೆ ಪಡೆದುಕೊಂಡಿದೆ.
ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ‘ಮೋದಿ’ ಅಲೆಯ ಹೊರತಾಗಿಯೂ 2014ರ ಲೋಕಸಭೆ ಚುನಾವಣೆಯಲ್ಲಿ ಆರ್‌ಜೆಡಿ ಸ್ಥಾನ ಪಡೆದುಕೊಂಡಿತ್ತು.
ಚುನಾವಣಾ ಆಯೋಗ ಫೆಬ್ರವರಿ 13ರಂದು ಮೂರು ಕ್ಷೇತ್ರದ ಉಪಚುನಾವಣೆಯ ಅಧಿಸೂಚನೆ ಹೊರಡಿಸಲಿದೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಫೆಬ್ರವರಿ 20 ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕ. ಫೆಬ್ರವರಿ 21 ನಾಮಪತ್ರ ಪರಿಶೀಲನೆ. ಫೆಬ್ರವರಿ 23ರಂದು ನಾಮಪತ್ರ ಹಿಂದೆಗೆಯಲು ಅಂತಿಮ ದಿನಾಂಕ. ಮಾರ್ಚ್ 14ರಂದು ಮತ ಎಣಿಕೆ ನಡೆಯಲಿದೆ.







