ಕಿರಣ್ ರಿಜಿಜು ವಿರುದ್ಧ ರೇಣುಕಾ ಚೌಧರಿ ಹಕ್ಕು ಚ್ಯುತಿ ಮಂಡನೆ
ಶೂರ್ಪನಖಿ ನಗು ವಿಡಿಯೋ

ಹೊಸದಿಲ್ಲಿ, ಫೆ.9: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದ ವೇಳೆ ನಕ್ಕ ಕಾರಣಕ್ಕೆ ಫೇಸ್‌ಬುಕ್‌ನಲ್ಲಿ ತನ್ನನ್ನು ವ್ಯಂಗ್ಯ ಮಾಡುವ ವಿಡಿಯೋವನ್ನು ಹಾಕಿದ ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಹಕ್ಕು ಚ್ಯುತಿ ಮಂಡಿಸಿದ್ದಾರೆ. ರಿಜಿಜು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ನಲ್ಲಿ 1980ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯ ತುಣುಕೊಂದನ್ನು ಹಾಕಲಾಗಿದ್ದು, ಅದರಲ್ಲಿ ರಾವಣನ ಸಹೋದರಿ ಶೂರ್ಪನಖಿ ಗಹಗಹಿಸಿ ನಗುವುದನ್ನು ತೋರಿಸಲಾಗಿದೆ. ಅದರ ಬೆನ್ನಿಗೇ, ರಾಜ್ಯಸಭೆಯಲ್ಲಿ ತನ್ನ ಭಾಷಣದ ಮಧ್ಯೆ ಜೋರಾಗಿ ನಕ್ಕ ಕಾರಣಕ್ಕೆ ಪ್ರಧಾನಿ ಮೋದಿ, ರೇಣುಕಾ ಚೌಧರಿ ಬಗ್ಗೆ ವ್ಯಂಗ್ಯವಾಡುವ ವಿಡಿಯೋ ತುಣುಕನ್ನು ಹಾಕಲಾಗಿದೆ.
ಪ್ರಧಾನಿಯ ವ್ಯಂಗ್ಯ ಮತ್ತು ರಿಜಿಜು ಅವರ ಫೇಸ್‌ಬುಕ್ ಪೋಸ್ಟ್‌ನಿಂದ ತೀವ್ರವಾಗಿ ಆಕ್ರೋಶಿತರಾದ ಚೌಧರಿ, ಇದು ಅತ್ಯಂತ ಆಕ್ಷೇಪಾರ್ಹ ವಿಷಯ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಿ ಮೋದಿ ತಮ್ಮ ಸರಕಾರ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾಗ ಚೌಧರಿ ಜೋರಾಗಿ ನಕ್ಕಿದ್ದರು. ಆಕೆಯನ್ನು ತಡೆಯಲು ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ಮುಂದಾದರು. ಈ ವೇಳೆ ಮಾತನಾಡಿದ ಮೋದಿ, ರೇಣುಕಾ ಅವರನ್ನು ತಡೆಯಬೇಡಿ. ರಾಮಾಯಣ ಧಾರಾವಾಹಿಯ ನಂತರ ಇಂಥ ನಗುವನ್ನು ಕೇಳಿಸುವ ಸೌಭಾಗ್ಯ ಈಗಷ್ಟೇ ದೊರಕಿದೆ ಎಂದು ವ್ಯಂಗ್ಯವಾಡಿದ್ದರು.
ಪ್ರಧಾನಿ ಯಾರ ಹೆಸರನ್ನು ಉಲ್ಲೇಖಿಸದಿದ್ದರೂ ಅವರು ಚೌಧರಿಯನ್ನು ರಾಮಾಯಣದ ಶೂರ್ಪನಖಿಗೆ ಹೋಲಿಸಿದ್ದರು. ಕಿರಣ್ ರಿಜಿಜು ತಮ್ಮ ಫೇಸ್‌ಬುಕ್ ಪೋಸ್ಟನ್ನು ಅಳಿಸಿ ಹಾಕಿದ್ದರೂ ಅವರ ಟ್ವಿಟರ್ ಖಾತೆಯಲ್ಲಿ ರಾಜ್ಯಸಭೆಯಲ್ಲಿ ನಡೆದ ಘಟನೆಯ ವಿಡಿಯೋ ತುಣುಕು ಈಗಲೂ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







