ಎಐಎಡಿಎಂಕೆಯಿಂದ 150 ಪದಾಧಿಕಾರಿಗಳ ಉಚ್ಛಾಟನೆ

ಚೆನ್ನೈ, ಫೆ.9: ಡಿಸೆಂಬರ್ 21ರಂದು ನಡೆದಿದ್ದ ಆರ್‌ಕೆ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದ ಹಿನ್ನೆಲೆಯಲ್ಲಿ ಪಕ್ಷದ ಘನತೆಗೆ ಹಾನಿ ಎಸಗಿದ ಕಾರಣಕ್ಕೆ 150 ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಆಡಳಿತಾರೂಢ ಎಐಎಡಿಎಂಕೆ ತಿಳಿಸಿದೆ.
ಎಐಎಡಿಎಂಕೆಯ ದಕ್ಷಿಣ ಚೆನ್ನೈ ಹಾಗೂ ಕುಡಲೂರು ಪಶ್ಚಿಮ ಘಟಕದ ಪದಾಧಿಕಾರಿಗಳನ್ನು ಉಚ್ಛಾಟಿಸಿದ್ದು ಉಚ್ಛಾಟಿತರಲ್ಲಿ ಮಾಜಿ ಸಚಿವ ಜಿ.ಸೆಂಥಮಿಳನ್ ಹಾಗೂ ಹಿರಿಯ ಮುಖಂಡ ಪರಿಥಿಲ್ ಇಳಮ್‌ವಜುತಿ ಸೇರಿದ್ದಾರೆ . ಸೆಂಥಮಿಳನ್ 2011-16ರ ಅವಧಿಯಲ್ಲಿ ಎಐಎಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದರೆ ಈ ಹಿಂದೆ ಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದ ಇಳಮ್‌ವಜುತಿ 2013ರಲ್ಲಿ ಎಐಎಡಿಎಂಕೆ ಸೇರಿದ್ದರು. ಈ ಹಿರಿಯ ಮುಖಂಡರಿಬ್ಬರೂ ಶಶಿಕಲಾ ಬಣದ ಮುಖಂಡ ಟಿಟಿವಿ ದಿನಕರನ್ ಬೆಂಬಲಿಗರಾಗಿದ್ದಾರೆ.
ಪಕ್ಷದ ಸಿದ್ಧಾಂತ ಹಾಗೂ ಕಾರ್ಯನೀತಿಯನ್ನು ಉಲ್ಲಂಘಿಸಿ ಪಕ್ಷಕ್ಕೆ ಅಪಕೀರ್ತಿ ತರುವ ರೀತಿ ನಡೆದುಕೊಂಡ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ . ಇವರು ಈಗ ಪಕ್ಷದಲ್ಲಿ ಹೊಂದಿರುವ ಹುದ್ದೆಯಿಂದ ವಜಾಗೊಳಿಸಿದ ಜೊತೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಉಚ್ಛಾಟಿಸಲಾಗಿದೆ. ಇವರೊಂದಿಗೆ ಪಕ್ಷದ ಕಾರ್ಯಕರ್ತರು ಯಾವುದೇ ಸಂಪರ್ಕ ಹೊಂದಿರಬಾರದು ಎಂದು ಪನ್ನೀರ್‌ಸೆಲ್ವಂ ಹಾಗೂ ಪಳನಿಸ್ವಾಮಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





