ಶೋಪಿಯಾನ್ ಪ್ರಕರಣ: ಸೇನಾಧಿಕಾರಿಯ ತಂದೆಯ ಮನವಿಯನ್ನು ಆಲಿಕೆಗೆ ಸುಪ್ರೀಂ ಒಪ್ಪಿಗೆ

ಶ್ರೀನಗರ, ಫೆ.9: ಇತ್ತೀಚೆಗೆ ನಡೆದ ಶೋಪಿಯಾನ್ ಗುಂಡಿನ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಆರೋಪಿ ಎಂದು ಹೆಸರಿಸಿರುವ ಸೇನಾಧಿಕಾರಿಯ ವಿರುದ್ಧದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಅಧಿಕಾರಿಯ ತಂದೆ ಸಲ್ಲಿಸಿರುವ ಮೇಲ್ಮನವಿಯನ್ನು ಆಲಿಸಲು ಸರ್ವೋಚ್ಚ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು, ಅಧಿಕಾರಿಯ ತಂದೆಯ ಮೇಲ್ಮನವಿಯನ್ನು ತುರ್ತಾಗಿ ಆಲಿಸಬೇಕು ಎಂಬ ವಕೀಲ ಐಶ್ವರ್ಯಾ ಭಟಿಯವರ ಮನವಿಯನ್ನು ಪರಿಗಣಿಸಿ ಸೋಮವಾರದಂದು ಮೇಲ್ಮನವಿಯನ್ನು ಆಲಿಸುವ ಭರವಸೆ ನೀಡಿತು.
ಶೋಪಿಯಾನ್ ಘಟನೆಗೆ ಸಂಬಂಧಪಟ್ಟಂತೆ ಸೇನಾಧಿಕಾರಿ ಮೇಜರ್ ಆದಿತ್ಯ ಕುಮಾರ್ ಅವರ ವಿರುದ್ಧ ಕಾನೂನುಬಾಹಿರವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಕೀಲರು ವಾದಿಸಿದ್ದರು.
ಭಾರತೀಯ ಸೇನೆಯ 10 ಗರ್ವಲ್ ರೈಫಲ್ಸ್‌ನಲ್ಲಿ ಮೇಜರ್ ಆಗಿರುವ ನನ್ನ ಮಗನ ಹೆಸರನ್ನು ಎಫ್‌ಐಆರ್‌ನಲ್ಲಿ ತಪ್ಪಾಗಿ ಮತ್ತು ಕಾರಣರಹಿತವಾಗಿ ಸೇರಿಸಲಾಗಿದೆ. ಘಟನೆಯ ವೇಳೆ ಸೇನಾ ತಂಡವು ಅಫ್ಸ್ಪಾ ಜಾರಿಯಲ್ಲಿದ್ದ ಪ್ರದೇಶದಲ್ಲಿ ಕರ್ತವ್ಯನಿರತವಾಗಿತ್ತು ಹಾಗೂ ಕಲ್ಲುಗಳನ್ನು ಎಸೆಯುತ್ತಾ ಸೇನಾ ವಾಹನಗಳಿಗೆ ಹಾನಿ ಮಾಡುತ್ತಿದ್ದ ನಿಯಂತ್ರಣವಿಲ್ಲದ ಮತ್ತು ಉದ್ವಿಗ್ನ ಯುವಕರ ಗುಂಪೊಂದರ ಮಧ್ಯೆ ಸೇನಾ ತಂಡ ಸಿಲುಕಿತ್ತು ಎಂದು ಲೆಫ್ಟಿನೆಂಟ್ ಕರ್ನಲ್ ಕರಮ್‌ವೀರ್ ಸಿಂಗ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಶೋಪಿಯಾನದ ಗನೊವ್‌ಪೊರಾ ಗ್ರಾಮದಲ್ಲಿ ಕಲ್ಲೆಸೆಯುತ್ತಿದ್ದ ಗುಂಪಿನತ್ತ ಸೇನೆಯು ಗುಂಡು ಹಾರಿಸಿದ ಪರಿಣಾಮವಾಗಿ ಇಬ್ಬರು ಯುವಕರು ಮೃತಪಟ್ಟಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆದೇಶಿಸಿದ್ದರು. ರನ್ಬೀರ್ ದಂಡಸಹಿತೆಯಂತೆ ಸೆಕ್ಷನ್ 302 (ಕೊಲೆ) ಮತ್ತು 307 (ಹತ್ಯಾಯತ್ನ) ಅಡಿಯಲ್ಲಿ ಮೇಜರ್ ಕುಮಾರ್ ಸೇರಿದಂತೆ 10 ಗರ್ವಲ್ ರೈಫಲ್‌ನ ಇತರ ಯೋಧರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







