ಫೆ.22ರಿಂದ 10ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
200 ಸಿನೆಮಾಗಳ ಪ್ರದರ್ಶನ

ಬೆಂಗಳೂರು, ಫೆ.9: ಹತ್ತನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಫೆ.22ರಿಂದ ಮಾ.1ರವರೆಗೆ ರಾಜಾಜಿನಗರದ ಒರಾಯನ್ ಮಾಲ್‌ನ 11 ಚಿತ್ರಮಂದಿರಗಳಲ್ಲಿ ನಡೆಯಲಿದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು ತಿಳಿಸಿದರು.
ಫೆ.22ರಂದು ಸಂಜೆ ವಿಧಾನಸೌಧದ ಮುಂಭಾಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 10ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಟ್ಟು ಏಳು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್‌ಪ್ಯಾಕ್, ಜೀವನಚರಿತ್ರೆ ಆಧರಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಈ ವಿಭಾಗದಲ್ಲಿ ಗೊಡಾರ್ಡ್, ಚಿತ್ರಕತೆಗಾರ ನಬೇಂದು ಘೋಷ್, ಕಾರ್ಲ್‌ಮಾರ್ಕ್ಸ್, ತಮಿಳು ಸಾಹಿತಿ ಅಶೋಕಮಿತ್ರನ್, ಡಾ.ರುಕ್ಮಾಬಾಯಿ ಸೇರಿದಂತೆ ಮೊದಲಾದವರ ಬಗ್ಗೆ ಸಾಕ್ಷಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.
ವಿಶೇಷ ಕಾರ್ಯಕ್ರಮ: ದಾದಾಸಾಹೇಬ್‌ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ.ವಿ.ಕೆ.ಮೂರ್ತಿ ಕುರಿತು ವಿಶೇಷ ಉಪನ್ಯಾಸ ಇದೆ. ಅಂತಾರಾಷ್ಟ್ರೀಯ ಚಿತ್ರಕತೆ ರಚನಕಾರ್ತಿ ಕ್ಲಾರಿ ಡೊಬ್ಬಿನ್‌ರಿಂದ ಚಿತ್ರಕತೆ ಬರೆಯುವ ಕಾರ್ಯಾಗಾರ ನಡೆಯಲಿದೆ. ರಂಗ್‌ದೇ ಬಸಂತಿ ಸಿನಿಮಾದ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರರೊಂದಿಗೆ ಸಂವಾದ ಕಾರ್ಯಕ್ರಮವಿದೆ.
ಸತ್ಯಜಿತ್ ರೇ ಚಲನಚಿತ್ರಗಳ ಬಗ್ಗೆ ಕೊಲ್ಕತ್ತಾದ ಸ್ವಪನ್‌ಮಲಿಕ್‌ರಿಂದ ಉಪನ್ಯಾಸ ಇದೆ. ಮನರಂಜನಾ ಉದ್ಯಮದಲ್ಲಿ ಕಾಪಿರೈಟ್ ಸಮಸ್ಯೆ ಕುರಿತು ಚರ್ಚೆ, ವರ್ಚುಯಲ್ ರಿಯಾಲಿಟಿ ಮೊದಲಾದವುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ಹಾಗೂ ಲಿಂಗ ಸಂವೇದನೆ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಮುಖ್ಯಾಂಶಗಳು
-ಸುಮಾರು 60ರಾಷ್ಟ್ರಗಳಿಂದ 200 ಸಿನೆಮಾಗಳು ಪ್ರದರ್ಶನಗೊಳ್ಳಲಿವೆ.
-ಚಿತ್ರೋತ್ಸವದಲ್ಲಿ ಏಷಿಯನ್ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳು, ಕನ್ನಡ ಚಲನಚಿತ್ರಗಳು ಹಾಗೂ ಕನ್ನಡದ ಜನಪ್ರಿಯ ಚಿತ್ರಗಳೆಂದು ವಿಭಾಗಿಸಲಾಗಿದೆ.
-ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಚಲಂ ಬೆನ್ನೂರ್‌ಕರ್ ಕುರಿತು ವಿಶೇಷ ಸ್ಮರಣಾ ಕಾರ್ಯಕ್ರಮವಿದೆ.
-ವಿದೇಶಿ ಪ್ರತಿನಿಧಿಗಳಾದ ಚಲನಚಿತ್ರ ನಿರ್ಮಾಪಕ ಮಾರ್ಕ್ ಬಶೆಟ್, ಛಾಯಾಗ್ರಾಹಕ ಫ್ರಾನ್ಸ್‌ನಿಂದ, ಅಸ್ಟ್ರೇಲಿಯಾದ ಸ್ಕ್ರಿಪ್ಟ್ ಸಲಹೆಗಾರ ಕಿರಿಲ್ ರರೆಲೋವ್, ಚಲನಚಿತ್ರ ವಿಮರ್ಶಕ ನಿನಾ ಕೊಚೆಲೀವಾ ಸೇರಿದಂತೆ ಹಲವರು ಆಗಮಿಸುತ್ತಿದ್ದಾರೆ.







