ಭಾಸ್ಕರ್ ಶೆಟ್ಟಿ ಕೊಲೆ: ಎಸ್‌ಪಿಪಿ ನೇಕಮ ತಡೆಯಾಜ್ಞೆ ತೆರವು
ರಾಜೇಶ್ವರಿ ಶೆಟ್ಟಿಯಿಂದ ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಕೆ
ಉಡುಪಿ, ಫೆ.9: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಶೇಷ ಅಭಿ ಯೋಜಕ ಶಾಂತಾರಾಮ್ ಶೆಟ್ಟಿ ನೇಮಕದ ತಡೆಯಾಜ್ಞೆ ತೆರವಿಗೆ ಸಂಬಂಧಿಸಿ ಹೈಕೋರ್ಟ್ ಆದೇಶದಂತೆ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಗೆ ರಾಜ್ಯ ಸರಕಾರ ವಿಶೇಷ ಅಭಿಯೋಜಕರಾಗಿ ಉಡುಪಿಯ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಅವರನ್ನು ನೇಮಕ ಮಾಡಿತ್ತು. ಇದರ ವಿರುದ್ಧ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವಿಗೆ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಹೈಕೋಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ನ್ಯಾಯಮೂರ್ತಿ ಫಣೀಂದ್ರ ವಿಶೇಷ ಅಭಿಯೋಜಕರ ನೇಮಕ ಕುರಿತ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದರು. ವಿಶೇಷ ಅಭಿ ಯೋಜಕರ ನೇಮಕ ಸಂಬಂಧ ಯಾವುದೇ ಅಕ್ಷೇಪಗಳಿದ್ದರೆ ವಾರದೊಳಗೆ ಸರಕಾರಕ್ಕೆ ಸಲ್ಲಿಸಬೇಕು. ಸರಕಾರ ಅದನ್ನು 15 ದಿನಗಳೊಳಗೆ ಬಗೆಹರಿಸಬೇಕು. ಅಲ್ಲಿಯವರೆಗೆ ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯ ನಡೆಸಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ಇದೀಗ ರಾಜೇಶ್ವರಿ ಶೆಟ್ಟಿ ವಿಶೇಷ ಅಭಿಯೋಜಕ ನೇಮಕ ಕುರಿತ ಆಕ್ಷೇಪಣೆ ಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ರಾಜೇಶ್ವರಿ ಪರ ವಕೀಲರು ನ್ಯಾಯಾಧೀಶರಿಗೆ ತಿಳಿಸಿದರು. ಹೈಕೋರ್ಟ್ ಆದೇಶದ ಪ್ರತಿ ಯನ್ನು ಶಾಂತಾರಾವ್ ಶೆಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಪ್ರಕರಣದ ವಿಚಾರಣೆ ಆರಂಭಕ್ಕೆ ದಿನಾಂಕ ನಿಗದಿ ಪಡಿಸುವ ದಿನವನ್ನು ಫೆ.23ಕ್ಕೆ ಮುಂದೂಡಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ಅಭಿ ಯೋಜಕಿ ಶಾಂತಿ ಭಾಯಿ ಹಾಜರಿದ್ದರು.







