ಎಲ್‌ಪಿಜಿ ವಿತರಕರ ಹುದ್ದೆಗಳಲ್ಲಿ ವಿಕಲಚೇತನರಿಗೆ ಅನ್ಯಾಯ: ನೋಟಿಫಿಕೇಷನ್‌ಗೆ ತಡೆ ನೀಡಿದ ಹೈಕೋರ್ಟ್

ಬೆಂಗಳೂರು, ಫೆ.9: ತೈಲ ಕಂಪೆನಿಗಳು ಎಲ್‌ಪಿಜಿ ವಿತರಕರ ಹುದ್ದೆಗಳಲ್ಲಿ ವಿಕಲಚೇತನರಿಗೆ ಶೇ.5ರಷ್ಟು ಮೀಸಲಾತಿಯನ್ನು ಕಲ್ಪಿಸಿಲ್ಲ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಹುದ್ದೆ ಭರ್ತಿಗೆ ಹೊರಡಿಸಿದ್ದ ನೋಟಿಫಿಕೇಷನ್‌ಗೆ ಹೈಕೋರ್ಟ್ ತಡೆ ನೀಡಿದೆ.
ಕರ್ನಾಟಕ ರಾಜ್ಯ ವಿಕಲಚೇತನರ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಕರ್ನಾಟಕ ರಾಜ್ಯಕ್ಕೆ 238 ಎಲ್‌ಪಿಜಿ ವಿತರಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಕ್ಷನ್ 37ರ ಪ್ರಕಾರ ವಿಕಲಚೇತನರಿಗೆ 11 ಹುದ್ದೆಗಳನ್ನು ಮೀಸಲಿರಿಸಬೇಕು. ಆದರೆ, ವಿಕಲಚೇತನರಿಗೆ ಬರೀ 6 ಹುದ್ದೆಗಳನ್ನು ಮೀಸಲಿಟ್ಟಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿಯ ಶುಲ್ಕವನ್ನು ಕಡಿಮೆಗೊಳಿಸಬೇಕು. ವಯಸ್ಸಿನ ಮೀತಿಯನ್ನು ಹೆಚ್ಚಿಸಬೇಕು, ಸಾಲ ಸೌಲಭ್ಯ ನೀಡಲು ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಇಂಡಿಯನ್ ಆಯಿಲ್ ಕಾರ್ಪೂರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ ಪೆಟ್ರೋಲಿಯಂಗೆ ತುರ್ತು ನೋಟಿಸ್ ಜಾರಿಗೊಳಿಸಿತು.





