ಮಣಿಪಾಲದಲ್ಲಿ ಕ್ಯಾನ್ಸರ್ ಗೆದ್ದು ಬಂದವರ ಕೂಟ

ಮಣಿಪಾಲ, ಫೆ.9: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಶಿರಡಿ ಸಾಯಿ ಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕ್ಯಾನ್ಸರ್ ಗೆದ್ದು ಬಂದವರ ಕೂಟವನ್ನು ಶುಕ್ರವಾರ ಶಿರಡಿ ಸಾಯಿಬಾಬಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಇದರಲ್ಲಿ ಸುಮಾರು 100 ಜನ ಕ್ಯಾನ್ಸರ್ ಗೆದ್ದವರು ಮತ್ತು ಆರೈಕೆ ನೀಡುವವರು ಭಾರೀ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಸಭೆಯನ್ನು ಕ್ಯಾನ್ಸರ್ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಅದನ್ನು ಹೇಗೆ ಯಶಸ್ವಿಯಾಗಿ ಎದುರಿಸಬೇಕೆಂದು ಆಯೋಜಿಸಲಾಗಿತ್ತು.
ಕೂಟವನ್ನು ಉದ್ಘಾಟಿಸಿದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ(ಮಾಹೆ) ಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಕ್ಯಾನ್ಸರ್ ಎಂಬುದು ಮರಣದಂಡನೆಯಲ್ಲ. ಕ್ಯಾನ್ಸರನ್ನು ಹೇಗೆ ಗೆಲ್ಲಬೇಕು ಎಂಬುದರ ಬಗ್ಗೆ ಕ್ಯಾನ್ಸರಿನಿಂದ ಬದುಕುಳಿದವರು ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆ. ಬದು ಕುಳಿದವರು ಮತ್ತು ಹೊಸದಾಗಿ ಕಾಯಿಲೆಗೆ ತುತ್ತಾದ ರೋಗಿಗಳಿಗೆ ಜೀವನದಲ್ಲಿ ಮತ್ತಷ್ಟು ಧೈರ್ಯ ಬರುವಂತೆ ಪ್ರೇರೇಪಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದರು.
ಸಂವಾದಾತ್ಮಕ ಅಧಿವೇಶನದಲ್ಲಿ ಕ್ಷ ಕಿರಣ ವಿಭಾಗದ ಪ್ರಾಧ್ಯಾಪಕಿ ಡಾ.ಸ್ಮಿತಿ ಎಸ್. ಮಾತನಾಡಿ, ವೈದ್ಯ-ರೋಗಿ-ಔಷಧ ಚಿಕಿತ್ಸೆಯ ತ್ರಿಕೋನದಲ್ಲಿನ ಅತ್ಯಂತ ಪ್ರಮುಖ ಅಂಶವೆಂದರೆ ರೋಗಿ. ರೋಗಿಯು ಧೃಡ ನಂಬಿಕೆ ಮತ್ತು ಉತ್ತಮ ಭರವಸೆ ಇಟ್ಟುಕೊಳ್ಳಬೇಕು. ವೈದ್ಯರು ಸೂಚಿಸಿದ ಔಷಧಿ ಮತ್ತು ಕ್ಷೇಮ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ರೋಗದ ಮೇಲೆ ಯಶಸ್ಸು ಪಡೆಯಲು ರೋಗ ನಿರ್ಣಯವನ್ನು ಆರಂಭಿಕ ಹಂತದಲ್ಲಿಯೇ ಮಾಡಬೇಕು ಎಂದು ತಿಳಿಸಿದರು.
ಬದುಕುಳಿದವರನ್ನು ಪ್ರೇರೇಪಿಸಲು ಪರಿಣಿತ ಮಾನಸಿಕ ಕ್ಯಾನ್ಸರ್ ತಜ್ಞರಿಂದ ಒಂದು ಅಧಿವೇಶನ ನಡೆಸಲಾಯಿತು. ಬದುಕುಳಿದವರು ಮತ್ತು ಅವರಿಗೆ ಕಾಳಜಿ ನೀಡುವವರು ಕ್ಯಾನ್ಸರಿನ ತಜ್ಞ ವೈದ್ಯರೊಡನೆ ಸಮಾಲೋಚನೆಯಲ್ಲಿ ತೊಡಗಿ ಚರ್ಚಿಸಿದರು.
ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪ್ರಜ್ಞಾ ರಾವ್, ಶಿರಡಿ ಸಾಯಿ ಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಸತಾದ್ರು ರೇ, ವೈದ್ಯಕೀಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಕಾರ್ತೀಕ ಉಡುಪ, ಕ್ಷ-ಕಿರಣ ಮತ್ತು ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ಶರಣ ಉಪಸ್ಥಿತರಿದ್ದರು.







