ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

ಮಂಗಳೂರು, ಫೆ. 9: ಬಿಸಿಯೂಟ ನೌಕರರು ಕಳೆದ 16 ವರ್ಷಗಳಿಂದ ಕನಿಷ್ಠ ಸಂಭಾವನೆ ಪಡೆದು ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುತ್ತಾ ಬಂದಿದ್ದಾರೆ. ಅವರ ವೇತನ ಹೆಚ್ಚಳಕ್ಕಾಗಿ ಈ ಹಿಂದೆ ರಾಜ್ಯ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿದಾಗ, ಹೆಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ರಾಜ್ಯ ಸರಕಾರವು ಇಂದಿಗೂ ಬೇಡಿಕೆ ಈಡೇರಿಸಿಲ್ಲ. ಅಲ್ಲದೆ ಈಗ ಕೇಂದ್ರ ಸರಕಾರವೂ ಶಾಲೆಯ ಬಿಸಿಯೂಟ ಯೋಜನೆಯ ಅನುದಾನವನ್ನು ಕಡಿತಗೊಳಿಸಿದೆ. ಪ್ರತೀ ಶಾಲೆಯಲ್ಲಿ ಆಹಾರ ಸಿದ್ಧಪಡಿಸುವುದರ ಬದಲು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ತೆರೆಯುವುದರ ಮೂಲಕ, ಖಾಸಗೀಕರಣಕ್ಕೆ ಮುಂದಾಗಿದೆ. ಕನಿಷ್ಠ ಕೂಲಿಯ ವ್ಯಾಪ್ತಿಗೆ ತಾರದೆ ಕಾರ್ಮಿಕರನ್ನು ದುಡಿಸಲಾಗುತ್ತದೆ ಎಂದು ಸಿಐಟಿಯು ದ.ಕ. ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಗಳನ್ನು ಟೀಕಿಸಿದರು.
ಮಂಗಳೂರು ತಾಲೂಕು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರಾರಂಭವಾದ ಬಿಸಿಯೂಟ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿಸಿಯೂಟ ಕಾರ್ಮಿಕರಿಗೆ ರೂ. 5,000 ವೇತನ ನೀಡಬೇಕು, ಕಾರ್ಮಿಕರಿಗೆ ಕನಿಷ್ಠ ಕೂಲಿ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಡಿಯೇ ಮೇಲ್ವಿಚಾರಣೆ ಇರಿಸಬೇಕು, ಪ್ರತೀ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಬೇಕು, ಈ ನೌಕರರಿಗೆ ಪೆನ್ಷನ್ ಸೌಲಭ್ಯ ನೀಡಬೇಕು, ಅಡುಗೆ ತಯಾರಿಸುವಾಗ ಆಗುವ ಅಪಘಾತಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಷ್ಕರ ನಿರತರು ಸರಕಾರದ ಮುಂದೆ ಮಂಡಿಸಿ ಮುಷ್ಕರ ನಡೆಸಲಾಗುತ್ತಿದೆ.
ಮುಷ್ಕರದಲ್ಲಿ ಸುಮಾರು 300 ಮಂದಿ ಭಾಗವಹಿಸಿದ್ದರು. ಫೆ.8ರಂದು ಬೆಂಗಳೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭವಾಗಿದ್ದು, ನೌಕರರು ಶಾಲೆಯಲ್ಲಿ ಮಧ್ಯಾಹ್ನದ ಆಹಾರ ತಯಾರಿಸುವುದನ್ನು ನಿಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಆಯಾಯ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಫೆ.9ರಿಂದ ಪ್ರಾರಂಭಗೊಂಡಿದೆ.
ಅಕ್ಷರದಾಸೋಹ ದ.ಕ. ಜಿಲ್ಲಾ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಿಐಟಿಯು ಮುಖಂಡರಾದ ಸುನೀಲ್‌ಕುಮಾರ್ ಬಜಾಲ್, ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಸಿಐಟಿಯು ಸಂಯೋಜಿತ ಕೋಟೆಕಾರು ಬೀಡಿ ಕಾರ್ಮಿಕರ ಸಂಘದ ಮುಖಂಡೆ ವಿಲಾಸಿನಿ ತೊಕ್ಕೊಟ್ಟು, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಅವರು ಮುಷ್ಕರ ನಿರತರನ್ನು ಬೆಂಬಲಿಸಿ ಮಾತನಾಡಿದರು.
ಅಕ್ಷರದಾಸೋಹ ದ.ಕ. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡಬಿದ್ರೆ, ಖಜಾಂಚಿ ಭವ್ಯಾ ಮುಚ್ಚೂರು, ವಲಯ ಸಂಘಟನೆಗಳ ಮುಖಂಡರಾದ ಮೂಡಬಿದ್ರೆಯ ಸುಮತಿ, ಗಿರಿಜ, ಗುರುಪುರ ವಲಯದ ಪ್ರಮೀಳಾ, ಕಿನ್ನಿಗೋಳಿ ವಲಯದ ಸುನೀತಾ, ಅನಿತಾ, ಮಂಗಳೂರು ವಲಯದ ರೇಖಾಲತಾ, ಉಳ್ಳಾಲ ವಲಯದ ಬಬಿತಾ ಮುಷ್ಕರದ ನೇತೃತ್ವ ವಹಿಸಿದ್ದರು.







