ಛತ್ತೀಸ್‌ಗಡದಲ್ಲಿ ಇಬ್ಬರು ಕಟ್ಟಾ ನಕ್ಸಲರ ಹತ್ಯೆ

ರಾಯಪುರ,ಫೆ.9: ಛತ್ತೀಸ್‌ಗಡದ ರಾಜನಂದಗಾಂವ್ ಜಿಲ್ಲೆಯ ಬೊಡ್ಲಾ ಗ್ರಾಮದ ಅರಣ್ಯದಲ್ಲಿ ಶುಕ್ರವಾರ ಮಧ್ಯಾಹ್ನ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಓರ್ವ ಡೆಪ್ಯೂಟಿ ಕಮಾಂಡರ್ ಸೇರಿದಂತೆ ಇಬ್ಬರು ಕಟ್ಟಾ ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ.
ಭದ್ರತಾ ಪಡೆಗಳ ಜಂಟಿ ತಂಡವೊಂದು ಮಧ್ಯಾಹ್ನ 12.30ರ ಸುಮಾರಿಗೆ ಬೊಡ್ಲಾ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬಂಡುಕೋರರು ಅವರ ಮೇಲೆ ಗುಂಡುಗಳನ್ನು ಹಾರಿಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಸುಮಾರು ಒಂದು ಗಂಟೆ ಕಾಲ ಗುಂಡಿನ ಕಾಳಗ ನಡೆದಿತ್ತು. ಘಟನಾ ಸ್ಥಳದಲ್ಲಿ ಇಬ್ಬರು ನಕ್ಸಲರ ಶವಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ರಾಜನಂದಗಾಂವ್ ಎಸ್‌ಪಿ ಪ್ರಶಾಂತ ಅಗರವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮೃತ ನಕ್ಸಲರನ್ನು ಮಾವೋವಾದಿಗಳ ಮಿಲಿಟರಿ ಪ್ಲಟೂನ್ ನಂ.55ರ ಡೆಪ್ಯೂಟಿ ಕಮಾಂಡರ್ ಮಹಾರಾಷ್ಟ್ರದ ಗಡಶಿರೋಳಿಯ ವಿನೋದ್ ಮತ್ತು ಪ್ಲಟೂನ್ ಸದಸ್ಯ ದಕ್ಷಿಣ ಬಸ್ತಾರ್‌ನ ಸಾಗರ್ ಎಂದು ಗುರುತಿಸಲಾಗಿದೆ.
ವಿನೋದ್ ಮತ್ತು ಸಾಗರ್ ತಮ್ಮ ತಲೆಯ ಮೇಲೆ ಅನುಕ್ರಮವಾಗಿ ಎಂಟು ಲಕ್ಷ ರೂ. ಮತ್ತು ಎರಡು ಲಕ್ಷ ರೂ.ಗಳ ಬಹುಮಾನಗಳನ್ನು ಹೊತ್ತಿದ್ದರು ಎಂದು ಅಗರವಾಲ್ ತಿಳಿಸಿದರು.





