ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ನಿಂದನೆ; ದೂರು
ಬೆಳ್ತಂಗಡಿ, ಫೆ. 9: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ದನವನ್ನು ತಿನ್ನುವ ದಲಿತರು ಮುಸ್ಲಿಮರಿಗೆ ಹುಟ್ಟಿರಬೇಕು ಎಂದು ಹಾಕಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕಿನ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪೂಂಜಾಲಕಟ್ಟೆ ಹಾಗೂ ಉಪ್ಪಿನಂಗಡಿ ಠಾಣೆಗಳಲ್ಲಿ ದೂರು ನೀಡಲಾಗಿದೆ.
ಜಯಂತ ಜಾನು ಉಜಿರೆ ಎಂಬ ಫೇಸ್ ಬುಕ್ ಅಕೌಂಟಿನಲ್ಲಿ ಈ ರೀತಿ ನಿಂದನಾತ್ಮಕವಾಗಿ ಬರೆಯಲಾಗಿದೆ ಎಂದು ಬೆಳ್ತಂಗಡಿ ಠಾಣೆಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳ್ತಂಗಡಿ ನಗರ ಸಂಚಾಲಕ ದೂರು ನೀಡಿದ್ದಾರೆ.
ದಲಿತ ಸಮುದಾಯದ ಕೆಲವು ಜಾತಿಗಳು ಶತಮಾನಗಳಿಂದ ತಮ್ಮ ಆಹಾರದ ಭಾಗವಾಗಿ ಗೋ ಮಾಂಸವನ್ನು ತಿನ್ನುತ್ತಿದ್ದಾರೆ. ಆದರೆ ಕಳೆದ ಕೆಲ ಸಮಯಗಳಿಂದ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ನಿರಂತರವಾಗಿ ಗೋ ಮಾಂಸದ ಹೆಸರಿನಲ್ಲಿ ದೇಶದಾದ್ಯಂತ ದಲಿತರ ಮೇಲೆ, ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಇದರ ಭಾಗವಾಗಿಯೇ ದಲಿತರು ಗೋವನ್ನು ತಿನ್ನುತ್ತಾರೆ ಅವರು ಯಾರೋ ಮುಸ್ಲಿಮರಿಗೆ ಹುಟ್ಟಿರಬೇಕು ಎಂದು ಪ್ರಚೋದನಕಾರಿಯಾಗಿ ಜಯಂತ್ ಜಾನು ಉಜಿರೆ ಎಂಬಾತ ಫೇಸ್ ಬುಕ್‌ನಲ್ಲಿ ಬರೆದಿದ್ದಾನೆ. ಇದರಿಂದಾಗಿ ದಲಿತ ಸಮುದಾಯವನ್ನು ಹಾಗೂ ದಲಿತ ಮಹಿಳೆಯರನ್ನು ಅಪಮಾನಿಸಿದಂತಾಗಿದ್ದು, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದಂತಾಗಿದೆ. ಅತ್ಯಂತ ಸೂಕ್ಷ್ಮವಾಗಿರುವ ಜಿಲ್ಲೆಯಲ್ಲಿ ಇಂತಹ ಹೇಳಿಕೆಗಳು ಗಲಭೆಗಳಿಗೆ ಕಾರಣವಾಗುವ ಅಪಾಯವಿದ್ದು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಪಮಾನಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಬೆಳ್ತಂಗಡಿ ಪೋಲೀಸರು ದೂರು ಸ್ವೀಕರಿಸಿದ್ದು, ಪರಿಶೀಲನೆ ನೆಡೆಸುತ್ತಿದ್ದಾರೆ. ತಾಲೂಕಿನ ವಿವಿಧ ಠಾಣೆಗಳಲ್ಲಿ ಇದೇ ರೀತಿ ದೂರುಗಳು ದಾಖಲಾಗಿದ್ದು ಎಲ್ಲ ದೂರುಗಳನ್ನು ಒಟ್ಟಾಗಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.







