ವಿಧಾನ ಸಭಾ ಚುನಾವಣೆ: ಎಸ್ ಡಿ ಪಿ ಐ ಪಕ್ಷದ 2ನೆ ಪಟ್ಟಿ ಪ್ರಕಟ; ದ.ಕ. ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಸ್ಪರ್ಧೆ
ಮಂಗಳೂರು, ಫೆ. 9: ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಸಮಿತಿಯು ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಮೊದಲ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರ ಆಯ್ಕೆಗೊಂಡಿರುತ್ತದೆ. ಇದೀಗ ಎರಡನೇ ಪಟ್ಟಿಯಲ್ಲಿ ಸುಳ್ಯ, ಪುತ್ತೂರು ಮತ್ತು ಮೂಡುಬಿದಿರೆ ಕ್ಷೇತ್ರ ಆಯ್ಕೆಗೊಂಡು ಸ್ಪರ್ಧೆ ಖಚಿತವಾಗಿದೆ.
ರಾಜ್ಯ ಸಮಿತಿಯು ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕ್ಷೇತ್ರವನ್ನು ಆಯ್ಕೆಗೊಳಿಸಿ, ಪ್ರಕಟಿಸಿದ್ದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ಸ್ವಾಗತಿಸುತ್ತದೆ. ಈಗಾಗಲೇ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿಯು ಚುನಾವಣೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದು ತಳಮಟ್ಟದಿಂದ ಕಾರ್ಯಕರ್ತರು ಹುಮ್ಮಸ್ಸಿನಿಂದ ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಯ್ಕೆಗೊಂಡಂತಹ ನಾಲ್ಕು ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿಕೊಂಡು ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯಗಳು ಜನತೆಯ ಮನೆ ಮನೆಗೆ ತಲುಪುವಂತೆ ಅಭಿಯಾನ ಕೈಗೊಳ್ಳಲಾಗುವು ದೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರ. ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.





