ಉಳ್ಳಾಲ:: ಮಾಧವ ಮಂಗಲ ಗುರೂಜಿ ಸಮುದಾಯ ಭವನ ಲೋಕಾರ್ಪಣೆ

ಉಳ್ಳಾಲ, ಫೆ. 9: ಉಳ್ಳಾಲದ ಮೊಗವೀರಪಟ್ಣದಲ್ಲಿ ನಿರ್ಮಾಣಗೊಂಡ ಸಮುದಾಯ ಭವನ ಉಳ್ಳಾಲಕ್ಕೆ ಕಿರೀಟದ ಕೊಡುಗೆಯಾಗಿದೆ. ಏಕತೆ, ಸಹೋದರತೆ, ಪ್ರೀತಿಯ ವಾತಾವರಣ ನಿರ್ಮಿಸಲು ಭವನ ಯುವಸಮುದಾಯಕ್ಕೆ ಶಕ್ತಿಯಾಗಿ ಬೆಳೆಯಲಿದೆ. ರಾಜ್ಯ ಸರಕಾರದಿಂದ ಎಲ್ಲ ವರ್ಗದವರಿಗೂ ಸಹಕರಿಸುವ ಕಾರ್ಯ ಆಗಿದೆ. ಬಂದು ಕೇಳಿದ ಎಲ್ಲ ವರ್ಗದವರಿಗೂ ಸರಕಾರ ಅನುದಾನವನ್ನು ಬಿಡುಗಡೆಗೊಳಿಸಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಧರ್ಮದವರ ಧಾರ್ಮಿಕ ಕೇಂದ್ರಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲ ವಜ್ರಮಹೋತ್ಸವದ ಆಂಗವಾಗಿ ಉಳ್ಳಾಲ ಮೊಗವೀರ ಗ್ರಾಮ ಸಭೆಗೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಮೊಗವೀರ ಕುಲಗುರು ಪೂಜನೀಯ ‘ಮಾಧವ ಮಂಗಲ ಗುರೂಜಿ ಸಮುದಾಯ ಭವನ ಲೋಕಾರ್ಪಣೆ, ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಿಗೆ ನೂತನ ವಸತಿಗೃಹ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಬ್ಬಕ್ಕ ಉತ್ಸವವನ್ನು ಬೀಚ್ ಉತ್ಸವವಾಗಿ ಸಮುದ್ರ ತೀರದಲ್ಲಿ ಆಚರಿಸುವ ಯೋಜನೆಯನ್ನು ಮುಂದಿನ ವರ್ಷ ನಡೆಸಲು ರೂಪುರೇಷೆಯನ್ನು ತಯಾರಿಸ ಲಾಗುವುದು. ಸರ್ವಧರ್ಮದ ಸಮನ್ವಯತೆಗೆ ಪೂರಕವಾದಂತಹ ಮೂರು ದಿನಗಳ ಅಬ್ಬಕ್ಕ ಉತ್ಸವ ಮತ್ತು ಬೀಚ್ ಉತ್ಸವವನ್ನು ಆಚರಿಸುವ ಮೂಲಕ ಉಳ್ಳಾಲ ಉತ್ಸವವಾಗಿ ಪರಿವರ್ತನೆ ನಡೆಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮುಂದಿನ ವರ್ಷದಿಂದ ಸಮುದ್ರ ಕಿನಾರೆಯಲ್ಲೇ ಅಬ್ಬಕ್ಕ ಉತ್ಸವ ಮತ್ತು ಬೀಚ್ ಉತ್ಸವವನ್ನು ಜತೆಯಾಗಿಯೇ ಮೂರು ದಿನಗಳ ಕಾಲ ಆಚರಿಸುವ ಯೋಜನೆ ರೂಪಿಸಲಾಗುವುದು. ಆ ಮೂಲಕ ಉತ್ಸವವನ್ನು ಪರಿಣಾಮಕಾರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಮಹಾ ಪ್ರಬಂಧಕ ಬಿ. ಚಂದ್ರಶೇಖರ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಮು ದಾಯ ಭವನ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ, ಮಧ್ಯಮ ವರ್ಗದವರಿಗೆ ಸಹಕಾರಿಯಾಗುವ ಯೋಜನೆಯನ್ನು ಸಮಾಜಕ್ಕೆ ಕೊಟ್ಟಂತಾಗಿದೆ. ಇದು ಸಮಾಜಕ್ಕೆ ಮಾದರಿಯಾದ ಕೊಡುಗೆಯಾಗಿದೆ ಎಂದರು.
ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಸಮುದಾಯ ಭವನ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ವಿಮಲ ಜನಾರ್ದನ ಸುವರ್ಣ ಉಳ್ಳಾಲ, ಉಳ್ಳಾಲ ಫಿಶ್‌ಮಿಲ್ ಮಾಲಕರ ಸಂಘದ ಅಧ್ಯಕ್ಷ ಎಚ್.ಕೆ. ಅಬ್ದುಲ್ ಖಾದರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ತಾಲೂಕು ಯೋಜನಾಕಾರಿ ಉಮ್ಮರಬ್ಬ, ಕರ್ನಾಟಕ ಪರ್ಸೀನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಶ್ರೀ ವ್ಯಾಘ್ರ ಮಂಗಳೂರಿನ ಲೋಕೇಶ್ ಉಳ್ಳಾಲ್, ಮೊಗವೀರ ಸಂಘದ ಶಿಕ್ಷಣ ಸಂಸ್ಥೆಗಳ ಮಾಜಿ ಸಂಚಾಲಕ ಬಾಬು ಬಂಗೇರ, ಉಡುಪಿಯ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುರಾಜ್ ಅಮೀನ್, ಶ್ರೀ ಮಾರುತಿ ಯುವಕ ಮಂಡಲದ ಅಧ್ಯಕ್ಷ ಕಿರಣ್ ಪುತ್ರನ್, ನಿತಿನ್‌ರಾಜ್ ಎಸೋಸಿಯೇಟ್ಸ್‌ನ ನಿತಿನ್‌ರಾಜ್, ಕಟ್ಟಡ ಗುತ್ತಿಗೆದಾರ ಪ್ರವೀಣ್ ಕುಲಾಲ್ ಕುಂಪಲ, ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ವಜ್ರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ದೇವದಾಸ್ ಪುತ್ರನ್ ಹಾಗೂ ಕೋಶಾಕಾರಿ ಸುನಿಲ್ ಪುತ್ರನ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸಿಂಧೂರ ರಾಜ, ವರ್ಷಲ್ ವಿ. ಬಂಗೇರ, ಆಶೀಶ್ ಎ. ಸುವರ್ಣ, ವಿಭಾ ವಿ.ಬಿ. ಬಂಗೇರ, ವಿನಯ ಕುಮಾರಿ, ಅಬ್ದುಲ ರಹೆಮಾನ್, ಸೋಹನ್ ಎ. ಕೋಟ್ಯಾನ್, ನಿಶಾನ್ ಕುಮಾರ್ ಬೆಂಗ್ರೆ ಹಾಗೂ ಶ್ರವಣ್ ಎಸ್. ಉಳ್ಳಾಲ್ ಅವರನ್ನು ಸನ್ಮಾನಿ ಸಲಾಯಿತು.
ವಜ್ರಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ವಿಶ್ವನಾಥ ಬಂಗೇರ ಸ್ವಾಗತಿಸಿದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ರಾಜೇಶ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಸನ್ಮಾನಿತರ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪುತ್ರನ್ ವಂದಿಸಿದರು.







