ಕೊಪ್ಪ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ.ಅಭಿವೃದ್ಧಿ: ಚಲುವರಾಯಸ್ವಾಮಿ

ಮದ್ದೂರು, ಫೆ.9: ಕೊಪ್ಪ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕೋಟ್ಯಾಂತರ ರೂ. ಅನುದಾನ ಬಿಡುಗಡೆಗೊಳಿಸಿ ಗ್ರಾಮಗಳ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಿರುವುದಾಗಿ ಶಾಸಕ ಎನ್. ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ಬೆಕ್ಕಳಲೆ ಗ್ರಾಪಂ ಕಾರ್ಯಾಲಯ, ಭಾರತ್ ನಿರ್ಮಾಣ ರಾಜೀವ್‍ಗಾಂಧಿ ಸೇವಾ ಕೇಂದ್ರ, ಹಾಲು ಉತ್ಪದಾಕರ ಸಂಘದ ನೂತನ ಕಟ್ಟಡ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೊಪ್ಪ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಅಂಬೇಡ್ಕರ್ ಭವನ, ಪಶು ವೈದ್ಯಕೀಯ ಆಸ್ಪತ್ರೆ, ರಸ್ತೆ ಅಬಿವೃದ್ಧಿ, ಡಾಂಬರೀಕರಣ ಸೇರಿದಂತೆ ಇನ್ನಿತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಹೋಬಳಿ ಕೇಂದ್ರವನ್ನಾಗಿಸಿರುವುದಾಗಿ ಹೇಳಿದರು.
ಕೌಡ್ಲೆ, ಪಟೇಲನಕೊಪ್ಪಲು, ಕಿರಂಗೂರು, ಕೊಪ್ಪ, ಹಳೇಹಳ್ಳಿ, ಆಬಲವಾಡಿ, ಅವ್ವೇರಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಕೋಟ್ಯಾಂತರ ರೂ. ಹಣ ಮಂಜೂರಾಗಿದ್ದು, ಅಭಿವೃದ್ಧಿ ಕಾರ್ಯಗಳು ಮುಗಿಯುವ ಹಂತದಲ್ಲಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ. 1 ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹ ಧನ, ಉಚಿತ ಅಕ್ಕಿ ವಿತರಣೆ, ರೈತರ ಸಾಲಮನ್ನಾ, ಮಕ್ಕಳಿಗೆ ಮತ್ತು ಗರ್ಭೀಣಿಯರಿಗೆ ಬಿಸಿಯೂಟ, ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆಂದು ವಿವರಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮನ್ನು ಶಾಸಕನ್ನಾಗಿಸುವ ಮೂಲಕ ಉಳಿದಿರುವ ಕಾಮಗಾರಿಗಳಿಗೆ ಅಗತ್ಯ ಕ್ರಮ ವಹಿಸಲು ಅವಕಾಶ ಕಲ್ಪಿಸುವಂತೆ ತಿಳಿಸಿದರಲ್ಲದೇ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಬೆಂಬಲಿಸುವಂತೆ ಮನವಿ ಮಾಡಿದರು.
ತಾಪಂ ಉಪಾಧ್ಯಕ್ಷ ಬಿ.ಎಂ.ರಘು, ಎಂಪಿಸಿಎಸ್ ಅಧ್ಯಕ್ಷ ಮಂಜೇಶ್, ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರೀಗೌಡ, ಮನ್‍ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಜಯರಾಂ, ಶ್ರೀಕಾಂತ್, ಸುರೇಶ್, ಇತರ ಮುಖಂಡರು ಉಪಸ್ಥಿತರಿದ್ದರು.







