ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಪಕೋಡಾ ತಯಾರಿಸಿ ಪ್ರತಿಭಟನೆ

ಉಡುಪಿ, ಫೆ.10: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದವರೆಗೆ ಪ್ರತಿಭಟನ ಜಾಥ ನಡೆಯಿತು. ಜಾಥದಲ್ಲಿ ಒಂಟೆ, ಕುದುರೆ ಜೊತೆಗೆ ಎರಡು ಕೈಗಾಡಿಗಳಲ್ಲಿ ಕಟ್ಟಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿಯನ್ನು ಹೊತ್ತು ತರಲಾಯಿತು. ಬಳಿಕ ಹುತಾತ್ಮ ಸ್ಮಾರಕದ ಎದುರು ಒಲೆ ಹಾಕಿ ಅದೇ ಕಟ್ಟಿಗೆಯನ್ನು ಉರಿಸಿ ಪಕೋಡಾ ತಯಾರಿಸಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ನೆರೆದ ಪ್ರತಿಭಟನಕಾರರಿಗೆ ಪಕೋಡವನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಮೂರು ತಿಂಗಳಲ್ಲಿ ತೈಲ ಬೆಲೆಯು 9.40 ರೂ. ಏರಿಕೆಯಾಗಿದೆ. ಈ ಮೂಲಕ ಕೇಂದ್ರ ಸರಕಾರ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಯುಪಿಎ ಸರಕಾರ ಇರುವಾಗ ಅಡುಗೆ ಅನಿಲದ ಬೆಲೆ 380 ರೂ.ಗಿಂತ ಏರಿಕೆ ಆಗಿಲ್ಲ. ಆದರೆ ಕೇಂದ್ರ ಸರಕಾರದ ನೀತಿಯಿಂದ ಬಡವರು 800 ರೂ. ನೀಡಿ ಅನಿಲ ಖರೀದಿಸಬೇಕಾಗಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಕರೆಯಂತೆ ಜಿಲ್ಲೆಯ ಎಲ್ಲ 10 ಬ್ಲಾಕ್‌ಗಳಲ್ಲಿಯೂ ಕೇಂದ್ರ ಸರಕಾರದ ಜನವಿರೋಧಿ ಹಾಗೂ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಯುವ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಯುವಕರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ ಭಾರತದಲ್ಲಿ ಇನ್ನು ಕಡಿಮೆ ಮಾಡಿಲ್ಲ. ಇವರು ದೇಶವನ್ನೇ ಲೂಟಿ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಮಾಡಲಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಜನಾರ್ದನ ಭಂಡಾರ್ಕರ್, ವರೋನಿಕ ಕರ್ನೆಲಿಯೋ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ರಿಯಾಝ್ ಪಳ್ಳಿ, ಕಿರಣ್ ಕುಮಾರ್, ಚಂದ್ರಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







