ಫೆ 10ರಿಂದ ತೋಡಾರು ಅರೆಬಿಕ್ ಕಾಲೇಜಿನ ವಾರ್ಷಿಕೋತ್ಸವ
ಮೂಡುಬಿದಿರೆ, ಫೆ.10: ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವ ಜಾಮಿಯಾ ನೂರಿಯಾ ಅರೆಬಿಯ್ಯಾ ಪಟ್ಟಿಕ್ಕಾಡ್ ಪಠ್ಯ ಕ್ರಮದೊಂದಿಗೆ ಅಂಗೀಕೃತಗೊಂಡ ತೋಡಾರಿನ ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ 8ನೇ ವಾರ್ಷಿಕೋತ್ಸವವು ಫೆ 10ರಿಂದ 12ರವರೆಗೆ ನಡೆಯಲಿದ್ದು, ಸಮಾರೋಪದಂದು ಉಲಮಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಪಂಡಿತ್ ಇದಿನಬ್ಬ ಹಾಜಿ ಬೊಳ್ಳೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಮೊದಲ ದಿನ ಅತ್ರಾಡಿ ಖಾಝಿ ಶೈಖುನಾ ಅಲ್‌ಹಾಜ್ ಅಬು ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯುವ ಆಧ್ಯಾತ್ಮಿಕ ಸಂಗಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಖಲೀಲ್ ಹುದವಿ ಪ್ರಭಾಷಣ ಮಾಡಲಿದ್ದಾರೆ. ಎರಡನೇ ದಿನ ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ ನಡೆಯಲಿದೆ. ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಅಧ್ಯಕ್ಷ ಸೈಯದ್ ಝೈನುಲ್ ಅಬಿದೀನ್ ತಂಙಲ್ ಕುನ್ನುಂಗೈ ಕೇರಳ ಇವರ ಅಧ್ಯಕ್ಷತೆಯಲ್ಲಿ ಎರಡನೇ ದಿನ ನಡೆಯುವ ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ ಜರಗಲಿದ್ದು, ವಾಗ್ಮಿ ಅಸ್ಲಂ ಅರ್ಹರಿ ಮೊಂಯ್ದುಕಡವ್ ಕೇರಳ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಫೆ.12ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇರಳದ ಶೈಖುನಾ ಶೈಖಲ್ ಜಾಮೀಅ ಅಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ವಾಗ್ಮಿ ಹಾಫಿಳ್ ನಿಝಾಮುದ್ದೀನ್ ಅರ್ಹರಿ ಕುಮ್ಮನಂ ಭಾಗವಹಿಸಲಿದ್ದಾರೆ. ಇದೇ ಸಂದರ್ಭ 2018ರ ಗಣ್ಯ ವ್ಯಕ್ತಿತ್ವಕ್ಕೆ ನೀಡುವ ಶಂಸುಲ್ ಉಲಮಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಸಮಾರಂಭದಲ್ಲಿ ಮಂತ್ರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಲೀಂ ಹಂಡೇಲು, ಎಂ.ಎ ಅಶ್ರಫ್, ಇಸಾಕ್ ಹಾಜಿ ತೋಡಾರು ಮತ್ತು ಬಾವಾ ಮೊಯ್ದಿನ್ ತೋಡಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







