ಲೋಯಾ ಸಾವು ಪ್ರಕರಣ : ಪಿಐಎಲ್‌ಗೆ ಮಹಾರಾಷ್ಟ್ರ ಸರಕಾರ ವಿರೋಧ

ಹೊಸದಿಲ್ಲಿ, ಫೆ. 10: ಸಿಬಿಐಯ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ಸಾವಿನ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಬಗ್ಗೆ ಮಹಾರಾಷ್ಟ್ರ ಸರಕಾರ ಶುಕ್ರವಾರ ವಿರೋಧ ವ್ಯಕ್ತಪಡಿಸಿದೆ.
ಈ ಸಾರ್ವಜನಿಕ ಹಿತಾಸಕ್ತಿ ದಾವೆ ಪ್ರೇರೇಪಿತ ಹಾಗೂ ಪೀತ ಪತ್ರಿಕೋದ್ಯಮ ಆಧಾರಿತ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ.
ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಲೋಯ ಆವರು 2014 ಡಿಸೆಂಬರ್ 1ರಂದು ನಾಗಪುರದಲ್ಲಿ ವಿವಾಹ ಸಮಾರಂಭವೊಂದಕ್ಕೆ ತೆರಳಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ನಾಲ್ವರು ನ್ಯಾಯಾಧೀಶರು ತಮ್ಮ ಹೇಳಿಕೆ ದಾಖಲು ಮಾಡಿದ ಬಳಿಕ ಈ ವಿಚಾರಣೆ ಅಂತ್ಯಗೊಳ್ಳಬೇಕು. ಒಂದೋ ಈ ನ್ಯಾಯಾಧೀಶರನ್ನು ನಂಬಬೇಕು ಇಲ್ಲವೇ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಬೇಕು ಎಂದು ಮಹಾರಾಷ್ಟ್ರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ನೌಕಾ ಪಡೆಯ ಮಾಜಿ ವರಿಷ್ಠ ಲಕ್ಷ್ಮೀನಾರಾಯಣ ರಾಮದಾಸ್ ಪರ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಪ್ರತಿಪಾದನೆಗೆ ರೋಹಟಗಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ಮಧ್ಯಪ್ರವೇಶಿಸುವ ವ್ಯಕ್ತಿಗೆ ವಾದಿಸಲು ಅವಕಾಶ ನೀಡುವಂತಿಲ್ಲ ಹಾಗೂ ಅವರು ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.







