ಆಂಧ್ರ ಪ್ರದೇಶಕ್ಕೆ 1,269 ಕೋ. ರೂ. ಬಿಡುಗಡೆ ಮಾಡಿದ ಕೇಂದ್ರ

ಅಮರಾವತಿ, ಫೆ. 10: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಿದ ಹಂಚಿಕೆ ಕುರಿತು ಎನ್‌ಡಿಎ ಹಾಗೂ ಅದರ ಮಿತ್ರ ಪಕ್ಷ ಟಿಡಿಪಿ ನಡುವೆ ಮೈತ್ರಿಯಲ್ಲಿ ವಿರಸ ಮೂಡಿರುವುದರ ನಡುವೆಯೂ ಕಳೆದ ಕೆಲವು ದಿನಗಳಲ್ಲಿ ಕೇಂದ್ರ ಸರಕಾರದ ಆಂಧ್ರಪ್ರದೇಶದ ವಿವಿಧ ಯೋಜನೆಗಳಿಗೆ 1,269 ಕೋ. ರೂ. ಬಿಡುಗಡೆ ಮಾಡಿದೆ.
ಒಟ್ಟು ಅನುದಾನದಲ್ಲಿ ಮಿತ್ರ ಪಕ್ಷಗಳಾದ ಬಿಜೆಪಿ ಹಾಗೂ ಟಿಡಿಪಿಯ ಬಿಕ್ಕಟ್ಟಿಗೆ ಕಾರಣವಾಗಿರುವ ಪೋಲಾವರಂ ಬಹು ಉದ್ದೇಶಿತ ಯೋಜನೆಗೆ ನೀಡಿದ 417.44 ಕೋ. ರೂ. ಕೂಡಾ ಸೇರಿದೆ.
2014 ಎಪ್ರಿಲ್ 1ರ ಬಳಿಕ ನೀರಾವರಿಯ ಒಂದು ಯೋಜನೆ (ಪೋಲವರಂನ ಒಂದು ಭಾಗ)ಗೆ ರಾಜ್ಯ ಸರಕಾರ ಈಗಾಗಲೇ ಬಳಸಿದ ಮೊತ್ತಕ್ಕೆ ಪ್ರತಿಯಾಗಿ ಈ ಹಣ (417.44 ಕೋ.ರೂ.) ಬಿಡುಗಡೆ ಮಾಡಲಾಗಿದೆ ಎಂದು ಆದೇಶ ನೀಡಿರುವ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಹಿರಿಯ ಜಂಟಿ ಆಯುಕ್ತ ಆರ್.ಪಿ.ಎಸ್ ವರ್ಮಾ ಹೇಳಿದ್ದಾರೆ.
ಈ ಯೋಜನೆಗೆ ಕೇಂದ್ರ ಪೋಲಾವರಂ ಯೋಜನಾ ಪ್ರಾಧಿಕಾರದ ಮೂಲಕ ಇದುವರೆಗೆ 4,329 ಕೋ. ರೂ. ಬಿಡುಗಡೆ ಮಾಡಿದೆ. ಆದರೆ, ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದ ಬಳಿಕ 7,200 ಕೋ. ರೂ. ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.
ಆಂಧ್ರಪ್ರದೇಶದ ಹಣಕಾಸು ಸಚಿವ ಯಾನಮಾಲ ರಾಮಕೃಷ್ಣುಡು ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಮನವಿ ಸಲ್ಲಿಸಿ, ಪೋಲಾವರಂ ಯೋಜನೆಗೆ ವೆಚ್ಚ ಮಾಡಲಾದ ಬಾಕಿ 3,217.63 ಕೋ. ರೂ. ನೀಡುವಂತೆ ಆಗ್ರಹಿಸಿದ್ದರು.
ಈ ನಡುವೆ ಕೇಂದ್ರ ಸರಕಾರ 4.17.44 ಕೋ. ರೂ. ಬಿಡುಗಡೆ ಮಾಡಿದೆ ಎಂದು ಇಲ್ಲಿನ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.







