ಪ್ರಧಾನಿ ಮೋದಿಯಿಂದ ಲಜ್ಜೆಗೆಟ್ಟ ಮಾತು: ಸಿದ್ದರಾಮಯ್ಯ

ಬಳ್ಳಾರಿ,(ಹೊಸಪೇಟೆ)ಫೆ.10: ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಪ್ರಧಾನಿ ಎಂಬುದನ್ನೆ ಮರೆತು ಆಧಾರ ರಹಿತ ಲಜ್ಜೆಗೆಟ್ಟು ಮಾತನಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶನಿವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಕೆಪಿಸಿಸಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಗೆ ಚಾಲನೆ ಹಾಗೂ ಬಿಜೆಪಿ ಶಾಸಕ ಅನಂದ ಸಿಂಗ್, ನಾಗೇಂದ್ರ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೈಲಿಗೆ ಹೋಗಿ, ಲೂಟಿ ಹೊಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಲಜ್ಜೆಗೆಟ್ಟು ‘ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ’ ಎಂದು ಹೇಳಲು ಅವರಿಗೆ ನಾಚಿಕೆಯಾಗಬೇಕು. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಅರ್ಹರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಹೇಳಿದರು.
ಅಮಿತ್ ಶಾ ಗುಜರಾತ್ ರಾಜ್ಯದವರು, ಕೊಲೆ ಪ್ರಕರಣಯೊಂದರಲ್ಲಿ ಜೈಲಿಗೆ ಹೋಗಿದ್ದನ್ನು, ಗೋದ್ರಾ ಹತ್ಯಾಕಾಂಡವನ್ನು ಮರೆತಿರಾ ಎಂದು ಪ್ರಶ್ನಿಸಿದ ಅವರು, ನಿಮ್ಮ ಸುಳ್ಳು, ಕೋಮುವಾದ ಕರ್ನಾಟಕದಲ್ಲಿ ನಡೆಯಲು ಸಾಧ್ಯವಿಲ್ಲ. ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ 8,165 ಕೋಟಿ ರೈತರ ಸಾಲಾ ಮನ್ನಾ ಮಾಡಿದೆ. ರೈತರ 42 ಸಾವಿರ ಕೋಟಿ ಸಾಲಾ ಮನ್ನಾ ಮಾಡಿ ಎಂದು ಹೇಳಿದರೂ ನರೇಂದ್ರ ಮೋದಿ ಅವರು ಒಪ್ಪಲಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತ ಅವಧಿಯಲ್ಲಿ 72 ಸಾವಿರ ಕೋಟಿ ಮನ್ನಾ ಮಾಡಿದ್ದರು. ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇದೆಯಾ ಎಂದು ಅವರು ಪ್ರಶ್ನೆ ಮಾಡಿದರು.
ಈ ನಾಡು ಬಸವಣ್ಣ, ಕನಕದಾಸ, ಕುವೆಂಪು, ಶಿಶುನಾಳಾ ಶರೀಫಾರ ನಾಡು. ಇಲ್ಲಿ ಕೋಮುವಾದ, ಜಾತಿ ಸಂಘರ್ಷದ ಬೆಂಕಿ ಹಚ್ಚಿ ಕರ್ನಾಟಕವನ್ನು ಹಿಡಿಯಬೇಕೆಂಬ ನಿಮ್ಮ ಕನಸು ಎಂದು ಸಕಾರ ಆಗಲಾರದು.ಇನ್ನು ನಮ್ಮ ಸರಕಾರದ ವಿರುದ್ಧ ಯಾವುದೇ ಅಲೆ ಇಲ್ಲ. ಎಲ್ಲ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎಲ್ಲ ಕಡೆ ಜನ ನಮ್ಮ ಕಾರ್ಯಕ್ರಮ ಮೆಚ್ಚಿಕೊಂಡಿದ್ದಾರೆ ಎಂದರು.







