ಮತಗಟ್ಟೆಗಳಲ್ಲಿ ವಿದ್ಯಾರ್ಥಿ ಸ್ವಯಂಸೇವಕರ ನೇಮಕ: ಜಿಲ್ಲಾಧಿಕಾರಿ

ಉಡುಪಿ, ಫೆ.10: ಜಿಲ್ಲೆಯಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಅನುಕೂಲಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳನ್ನು ಶನಿವಾರ ಉದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಮತದಾನ ಮಾಡುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮತಗಟ್ಟೆಗಳಿಗೆ ಆಗಮಿಸುವ ವಿಕಲಚೇತನರಿಗೆ ವೀಲ್‌ಚೇರ್ ಮೂಲಕ ಮತಗಟ್ಟೆ ತಲುಪಿಸುವುದು, ಗರ್ಭಿಣಿಯರು, ವೃದ್ಧರಿಗೆ ಮತದಾನ ಮಾಡಲು ಸಹಕರಿಸುವುದರ ಜೊತೆಗೆ ಮತದಾನಕ್ಕೆ ಆಗಮಿಸುವವರಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಮುಂತಾದ ಸೇವೆ ನೀಡಲು ಕಾಲೇಜು ವಿದ್ಯಾರ್ಥಿಗಳ ಸ್ವಯಂ ಸೇವಕರ ತಂಡವನ್ನು ನಿಯೋಜಿಸಲಾಗುವುದು ಎಂದರು.
ಈ ಸ್ವಯಂಸೇವಕರಿಗೆ ಅಗತ್ಯವಿರುವ ಸೂಕ್ತ ತರಬೇತಿ ನೀಡಿ, ಅವರು ಮತದಾನ ಮಾಡುವ ಮತಗಟ್ಟೆಯಲ್ಲಿಯೇ ಕಾರ್ಯ ನಿರ್ವಹಿಸಲು ನಿಯೋಜಿಸ ಲಾಗುವುದು. ಪ್ರಜಾಪ್ರುತ್ವದ ಯಶಸ್ವಿಗೆ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ ತಮ್ಮ ಅಮೂಲ್ಯ ಕೊಡುಗೆ ನೀಡಲು ಇದು ಒಂದು ಸದಕಾಶ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಬಾರಿಯ ಮತದಾನ ಯಂತ್ರದಲ್ಲಿ ವಿವಿ ಪ್ಯಾಟ್ ಉಪಕರಣ ಅಳವಡಿಸಲಾಗುವುದು. ಇದರಿಂದ ನಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬ ಮಾಹಿತಿಯನ್ನು ಅಲ್ಲಿಯೇ ಖಾತರಿಪಡಿಸಿಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ಈ ಕುರಿತು ತಮ್ಮ ವ್ಯಾಪ್ತಿಯ ಮತದಾರರಿಗೆ ಅರಿವು ಮೂಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಬಿಎಲ್‌ಒಗಳನ್ನು ಸಂಪರ್ಕಿಸಿ ಅವರೊಂದಿಗೆ ‘ಅವೇರ್‌ನೆಸ್ ಗ್ರೂಪ್’ ರಚಿಸುವಂತೆ ಸೂಚಿಸಿದರು. ಈ ಕುರಿತು ಎಲ್ಲಾ ಬಿಎಲ್‌ಓಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ಬಿಎಲ್‌ಓಗಳ ವಿವರಗಳು ಚುನಾವಣಾ ವೆಬ್‌ಸೈಟ್‌ನಲ್ಲಿ ಲ್ಯವಿದ್ದು, ಈ ಗ್ರೂಪ್‌ನ ಸದಸ್ಯರಿಗೆ ಮತದಾನದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮಾಹಿತಿಯ ವಿವರ ಒದಗಿಸುವುದಾಗಿ ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡು, ತಪ್ಪದೇ ಮತ ಚಲಾಯಿಸಿ. ಮತದಾನ ಮಾಡದಿದ್ದರೆ ತಾವು ಪ್ರಶ್ನಿಸುವ, ಸಮಸ್ಯೆ ಹೇಳಿಕೊಳ್ಳುವ ಅವಕಾಶದಿಂದ ವಂಚಿತರಾಗುತ್ತೀರಿ. ಆದ್ದರಿಂದ ಮತ ಚಲಾಯಿಸಿ, ಸರಕಾರ ಮತ್ತು ಜನಪ್ರತಿನಿಧಿಗಳನ್ನು ತಮ್ಮ ಸಮಸ್ಯೆಗಳ ಕುರಿತು ಪ್ರ್ನೆ ಮಾಡಿ ಎಂದು ಪ್ರಿಯಾಂಕ ತಿಳಿಸಿದರು.
ಪಾರದರ್ಶಕ, ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಯಾವುದೇ ಅಡಚಣೆಯಿದ್ದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮತದಾನ ವನ್ನು ಹಬ್ಬದ ರೀತಿಯಲ್ಲಿ ಆಚರಿಸಿ, ತಮ್ಮ ಮತಗಟ್ಟೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿ ಮಾಡಿ. ಮತಗಟ್ಟೆಯಲ್ಲಿ ಈ ವಾತಾವರಣ ಸೃಷ್ಠಿ ಮಾಡಲು ವಿದ್ಯಾರ್ಥಿಗಳ ಬಳಿ ಯೋಜನೆಗಳಿದ್ದರೆ ತಿಳಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಪ್ರಿಯಾಂಕ ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರ.ದ.ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.







