ಸುಶಿಕ್ಷಿತ ನಿರುದ್ಯೋಗಿ ಯುವಜನಾಂಗ ಪಕೋಡ ಕರಿಯಬೇಕೆ ?: ಬಿಜೆಪಿಗೆ ಶಿವಸೇನೆ ಪ್ರಶ್ನೆ

ಮುಂಬೈ, ಫೆ. 10: ಮಂತ್ರಾಲಯ (ರಾಜ್ಯ ಕಾರ್ಯಾಲಯ) ಎದುರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಶಿವಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನಿರುದ್ಯೋಗ ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ರಾಜ್ಯದ ಶಿಕ್ಷಿತ ನಿರುದ್ಯೋಗಿ ಯುವ ಜನಾಂಗ ಪಕೋಡ ಕರಿಯಲು ಆರಂಭಿಸಬೇಕೆ ಎಂದು ಪ್ರಶ್ನಿಸಿದೆ.
ಮಂತ್ರಾಲಯ ಜನರ ನಿರೀಕ್ಷೆ ಹಾಗೂ ಆಕಾಂಕ್ಷೆಯ ಪ್ರತಿಬಿಂಬವಾಗಬೇಕಿತ್ತು. ಆದರೆ, ಅದು ನಿರೀಕ್ಷೆ ಹಾಗೂ ಆಕಾಂಕ್ಷೆಯ ಮಸಣವಾಗಿ ಮಾರ್ಪಟ್ಟಿದೆ ಎಂದು ಮರಾಠಿ ಪತ್ರಿಕೆ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಹೇಳಿದೆ. ಪ್ರಸಕ್ತ ರಾಜ್ಯ ಸರಕಾರದಲ್ಲಿರುವ ಮಂತ್ರಿಗಳನ್ನು ಕಟುವಾಗಿ ಟೀಕಿಸಿರುವ ಸೇನೆ, ಆಡಳಿತದ ಸ್ಥಾನಗಳನ್ನು ಅಲಂಕರಿಸುವವರಲ್ಲಿ ಹೆಚ್ಚಿನವರು ನಿರ್ಜೀವ ಹಾಗೂ ಭಾವಶೂನ್ಯರಂತೆ ಕಾಣುತ್ತಾರೆ ಎಂದಿದೆ. ಕೆಲವು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಸೆಲ್ಫಿ ಕೇಂದ್ರ ರೂಪಿಸಿದ್ದಾರೆ. ಆದರೆ, ಮಂತ್ರಾಲಯ ಮಾತ್ರ ಆತ್ಮಹತ್ಯಾ ಕೇಂದ್ರವಾಗುತ್ತಿದೆ ಎಂದು ಸೇನೆ ವ್ಯಂಗ್ಯವಾಡಿದೆ.
ಕಳೆದ ಎರಡು ತಿಂಗಳಲ್ಲಿ ಮತ್ರಾಲಯದಲ್ಲಿ ನಾಲ್ಕು ಆತ್ಮಹತ್ಯಾ ಪ್ರಯತ್ನ ನಡೆದಿದೆ. ಇದರಲ್ಲಿ ಎರಡು ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಗುರುವಾರ ಇನ್ನೊಂದು ಆತ್ಮಹತ್ಯೆ ನಡೆದಿದೆ. ಇಲ್ಲಿ ಇತ್ತೀಚೆಗೆ ನಡೆಯುತ್ತಿರುವ ಆತ್ಮಹತ್ಯೆ ಘಟನೆಗಳು ರಾಜ್ಯ ಹೃದಯಹೀನವಾಗುತ್ತಿರುವುದಕ್ಕೆ ಸಾಕ್ಷಿ ಎಂದು ಶಿವಸೇನೆ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.







