ಫೆ.11: ಮಣಿಪಾಲ ಸಿಲ್ವರ್ ಮ್ಯಾರಾಥಾನ್
ಉಡುಪಿ, ಫೆ.10: ಮಣಿಪಾಲ ಮಾಹೆ ಮತ್ತು ಸಿಂಡಿಕೇಟ್ ಬ್ಯಾಂಕ್ ಹಾಗೂ ಅದಾನಿ ಯುಪಿಸಿಎಲ್, ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗ ದೊಂದಿಗೆ ‘ಮಣಿಪಾಲ ಸಿಲ್ವರ್ ಮ್ಯಾರಾಥಾನ್’ಗೆ ಫೆ.11ರಂದು ಬೆಳಗ್ಗೆ 6:15ಕ್ಕೆ ಮಣಿಪಾಲದಲ್ಲಿ ಚಾಲನೆ ನೀಡಲಾಗುವುದು ಎಂದು ಮಣಿಪಾಲ ಮ್ಯಾರಾಥಾನ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9ಗಂಟೆಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಅಧ್ಯಕ್ಷತೆ ಯನ್ನು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ಅದಾನಿ ಯುಪಿಸಿ ಎಲ್‌ನ ಕಿಶೋರ್ ಆಳ್ವ, ಡಾ.ಎಚ್.ವಿನೋದ್ ಭಟ್ ಭಾಗವಹಿಸಲಿರುವರು ಎಂದು ತಿಳಿಸಿದರು.
ಹಾಫ್ ಮ್ಯಾರಾಥಾನ್, 21ಕಿ.ಮೀ., 10ಕಿ.ಮೀ., 5 ಕಿ.ಮೀ. ಮತ್ತು ಮುಕ್ತ ವಿಭಾಗಗಳಲ್ಲಿ ಒಟ್ಟು 2500 ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ವಿಭಾಗಗಳಲ್ಲಿ ಟೈಮಿಂಗ್ ಚಿಪ್‌ಗಳನ್ನು ನೀಡಲಾಗುವುದು. ಜಿಲ್ಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ 3ಕಿ.ಮೀ. ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಗಳ 5ಕಿ.ಮೀ. ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ 5 ಕಿ.ಮೀ. ವಿಭಾಗಗಳಲ್ಲಿ ಒಟ್ಟು 2000, 3ಕಿ.ಮೀ. ಮತ್ತು 5ಕಿ.ಮೀ. ಫನ್‌ರನ್ ವಿಭಾಗದಲ್ಲಿ ಒಟ್ಟು 6000 ಮಂದಿ ನೋಂದಣಿ ಮಾಡಿದ್ದಾರೆ ಎಂದರು.
ಹಾಫ್ ಮ್ಯಾರಾಥಾನ್ ಮಾರ್ಗ ವಿವರ ಈ ರೀತಿ ಇದೆ. ಮಣಿಪಾಲ ಮಾಹೆ ಕಚೇರಿ- ಕಂಟ್ರಿ ಇನ್ ಸರ್ಕಲ್- ಸಿಂಡಿಕೇಟ್ ಸರ್ಕಲ್- ಮರಳಿ ಕಂಟ್ರಿ ಇನ್ ಸರ್ಕಲ್- ಸಾಯಿರಾಧಾ ಗ್ರೀನ್ ವ್ಯಾಲಿ- ಸೆಂಚುರಿ ಫಾರ್ಮ್- ಪೆರಂಪಳ್ಳಿ ಚರ್ಚ್- ರೈಲ್ವೆ ಸೇತುವೆ- ಗುಂಡಿಬೈಲು- ಅಂಬಾಗಿಲು- ರಾಷ್ಟ್ರೀಯ ಹೆದ್ದಾರಿ66- ನಿಟ್ಟೂರು- ಆಭರಣ ಮೋಟಾರ್ಸ್- ಕರಾವಳಿ ಜಂಕ್ಷನ್- ಬನ್ನಂಜೆ- ಬ್ರಹ್ಮಗಿರಿ- ಕಿನ್ನಿಮುಲ್ಕಿ- ಬಿಗ್‌ಬಝಾರ್- ಉಡುಪಿ ಸರ್ವಿಸ್ ಬಸ್ ನಿಲ್ದಾಣ- ಕಲ್ಸಂಕ- ಇಂದ್ರಾಳಿ- ಮಣಿಪಾಲ.
ಸುದ್ದಿಗೋಷ್ಠಿಯಲ್ಲಿ ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವ, ರಘುರಾಮ ನಾಯಕ್, ರಮೇಶ್ ನಾಯಕ್, ಡಾ.ವಿನೋದ್ ನಾಯಕ್, ಗಿರೀಶ್ ನಾವಡ, ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.







