ಕರಾವಳಿ ಭಾಗದಲ್ಲಿ ಬಿಜೆಪಿ ಅಲೆ ಇಲ್ಲ : ಯು.ಟಿ.ಖಾದರ್

ಮೈಸೂರು, ಫೆ.10: ಕರಾವಳಿ ಭಾಗದಲ್ಲಿ ಬಿಜೆಪಿ ಅಲೆ ಇಲ್ಲ. ಇದರಿಂದ ಬೇಕೆಂದೇ ಕೋಮು ಗಲಭೆಯನ್ನು ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶನಿವಾರ ಮೈಸೂರಿಗೆ ಆಗಮಿಸಿದ ಅವರು, ಸರಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶವದ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ, ಕರಾವಳಿಯಲ್ಲಿ ಬಿಜೆಪಿ ಅಲೆ ಇಲ್ಲ. ಬಿಜೆಪಿ ಅಲೆ ಇದ್ದಿದರೆ ಆ ಪಕ್ಷದ ರಾಷ್ಟ್ರಾಧ್ಯಕ್ಷರು ಮೂರು ದಿನ ಬಂದು ಠಿಕಾಣಿ ಹೂಡುತ್ತಿರಲಿಲ್ಲ ಎಂದು ಎಂದು ಹರಿಹಾಯ್ದರು.
ಜೊತೆಗೆ ಮಂಗಳೂರಿನಲ್ಲಿ ಸರಕಾರಿ ಜಾಗವನ್ನು ಮಸೀದಿಗೆ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣೆ ಸಮಯದಲ್ಲಿ ಇವೆಲ್ಲಾ ಇರುತ್ತದೆ, ಸರಕಾರಿ ಜಾಗವನ್ನು ಮಸೀದಿಗೆ ಕೊಡಬಾರದು ಎಂಬ ಕಾನೂನು ಇದೆಯಾ. ಮಸೀದಿಗೆ, ಚರ್ಚ್, ದೇವಸ್ಥಾನಗಳಿಗೆ ಜಾಗಗಳನ್ನು ಕೊಡುವ ಒಂದು ವ್ಯವಸ್ಥೆ ಇದೆ. ಅದರ ಪ್ರಕಾರವಾಗಿ ಜಾಗ ನೀಡಿದ್ದೇವೆ. ದುಬೈನಲ್ಲೇ ದೇವಾಲಯಗಳನ್ನು ಕಟ್ಟಲು ಜಾಗ ನೀಡಲಾಗಿದೆ. ಮಸೀದಿ ಕಟ್ಟಲು ಜಾಗ ನೀಡಬಾರದು ಎಂದು ಎಲ್ಲಿ ಹೇಳಲಾಗಿದೆ ಎಂದು ಪ್ರಶ್ನಿಸಿದರು.
ನ್ಯಾಯಬೆಲೆ ಅಂಗಡಿಗಳು ಇನ್ನು ಮುಂದೆ ಸೇವಾ ಕೇಂದ್ರಗಳಾಗಿ ಪರಿವರ್ತನೆಯಾಗಲಿದೆ. ಪಡಿತರ ಕಾರ್ಡ್‌ದಾರರು ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪಡಿತರ ಪಡೆಯಬಹುದು. ಪಡಿತರ ಸೇವೆಯು ನಿಗದಿತ ಅಂಗಡಿಗಳಿಗೆ ಸೀಮಿತವಾಗಿಲ್ಲ. ಪಡಿತರದಾರರಿಗೆ ಅನುಕೂಲವಾಗಲೆಂದು ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.







