ರಾಜ್ಯ ರಾಜಕಾರಣಕ್ಕೆ ಬರಲ್ಲ: ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ, ಫೆ.10: ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಆಲೋಚನೆ ನನಗೆ ಇಲ್ಲ. ಸದ್ಯ ಸಂಸದೆಯಾಗಿ ಆರಾಮದಲ್ಲಿದ್ದೇನೆ. ವಿದ್ಯಾರ್ಥಿಯಾಗಿ ದೆಹಲಿ ರಾಜಕಾರಣದ ಒಳ್ಳೆಯ ಅನುಭವ ಪಡೆದುಕೊಳ್ಳುತ್ತಿದ್ದೇನೆ. ಆದುದರಿಂದ ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಆತುರ ಇಲ್ಲ ಎಂದು ಉಡುಪಿ ಚಿಕ್ಕಮ ಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಸ್ವಂತವಾಗಿ ಬೆಳೆಯುವ ಕ್ಷೇತ್ರ. ನನಗೆ ರಾಜ್ಯದ ಜವಾಬ್ದಾರಿ ಇರುವುದರಿಂದ ಪಕ್ಷದ ತೀರ್ಮಾನದಂತೆ ಕೆಲಸ ನಿರ್ವಹಿಸುತ್ತಿದ್ದೇನೆ. ಆದರೆ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ ಎಂದು ಕ್ಷೇತ್ರಕ್ಕೆ ಬಾರದ ಕುರಿತ ತನ್ನ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಕ್ರೀಡಾಕಿಟ್‌ಗಳು ಹಾಗೂ ಅನುದಾನಗಳನ್ನು ನೀಡುವ ಮೂಲಕ ಯುವಕ ಮಂಡಲಗಳಿಗೆ ಆಮಿಷ ಒಡ್ಡುತ್ತಿದೆ. ಆದರೆ ಭ್ರಷ್ಟ ಕಾಂಗ್ರೆಸ್‌ನ ಯಾವುದೇ ಆಮಿಷಕ್ಕೆ ಕರಾವಳಿ ಯುವ ಜನತೆ ಮರಳಾ ಗುವುದಿಲ್ಲ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಚುನಾವಣೆಗೆ ಗಿಮಿಕ್. ಅವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಠ ಮಂದಿರ ವಶಪಡಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯು ಗುತ್ತಿಗೆ ಕಂಪೆನಿ ನಷ್ಟ ದಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಪಡುಬಿದ್ರೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ತಕ್ಷಣವೇ ಮಾಡಲು ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೇಂದ್ರ ರಸ್ತೆ ನಿಧಿಯಿಂದ 2017-18ನೆ ಸಾಲಿನಲ್ಲಿ ಉಡುಪಿ ಜಿಲ್ಲೆಗೆ 133 ಕೋಟಿ ಮತ್ತು ಚಿಕ್ಕಮಗಳೂರು ಜಿಲ್ಲೆಗೆ 183 ಕೋಟಿ ರೂ. ಬಿಡುಗಡೆ ಮಾಡ ಲಾಗಿದೆ. ಈಗಾಗಲೇ ಹೆಚ್ಚಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆ.19,20,21 ರಂದು ಕರಾವಳಿ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದು, ಫೆ.19ರಂದು ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿರುವರು. 20ರಂದು ದೇವರ ದರ್ಶನ ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಸಂಜೆ 5 ಗಂಟೆಗೆ ಉಡುಪಿ ವಡಭಾಂಡೇಶ್ವರ ಬೀಚ್‌ನಲ್ಲಿ ನಡೆಯುವ ಬಿಜೆಪಿ ಮೀನು ಗಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವರು. ನಂತರ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ21ರಂದು ಬೆಳಗ್ಗೆ ಅಮ್ಮಣ್ಣಿ ರಾಮಣ್ಣ ಆವರಣದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಲಿರುವರು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಟ್ಟಾರು ರತ್ನಾಕರ್ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಕಿರಣ್ ಕುಮಾರ್, ಶ್ಯಾಮಲ ಕುಂದರ್, ಶೀಲಾ ಕೆ.ಶೆಟ್ಟಿ ಉಪಸ್ಥಿತರಿದ್ದರು.







