ಕುಮಾರಸ್ವಾಮಿ ನನಗೆ ಹಲ್ಲೆ ನಡೆಸಿಲ್ಲ: ಡಾ.ಕೆ.ಅನ್ನದಾನಿ ಸ್ಪಷ್ಟನೆ
ಮಂಡ್ಯ, ಫೆ.10: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ಹಲ್ಲೆ ಮಾಡಿಲ್ಲ ಇದೆಲ್ಲವೂ ವಿರೋಧಿಗಳ ಅಪಪ್ರಚಾರ ಎಂದು ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7 ರಂದು ಮಳವಳ್ಳಿ ತಾಲೂಕಿನನಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದ ವೇಳೆ ಕುಮಾರಸ್ವಾಮಿ ಕಿರುಗಾವಲಿಗೆ ಆಗಮಿಸಿದಾಗ ಸಾವಿರಾರು ಕಾರ್ಯಕರ್ತರು ಹೋಬಳಿ ಜಾ.ದಳ ಕಚೇರಿ ಉದ್ಘಾಟಿಸುವಂತೆ ಒತ್ತಾಯಿಸಿದರು. ಮುಂದಿನ ಗ್ರಾಮಗಳ ಭೇಟಿ ನಂತರ ಬರುವುದಾಗಿ ಕುಮಾರಸ್ವಾಮಿ ಹೇಳಿದರೂ ಕೇಳಲಿಲ್ಲ. ಆಗ ನನಗೆ ಮೈಕ್ ತೆಗೆದುಕೊಂಡು ಹೋಗಿ ಮಾತನಾಡು ಎಂದು ಹೇಳಿದರು. ಅದನ್ನೇ ಕೆಲ ಕಿಡಿಗೇಡಿಗಳು ವೀಡಿಯೋ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಹಾಗೂ ನನ್ನ ನಡುವೆ ಅಣ್ಣ-ತಮ್ಮಂದಿರ ಸಂಬಂಧವಿದೆ. ಜಾ.ದಳದಲ್ಲಿ ಏಕವಚನದಲ್ಲಿ ಸಲುಗೆಯಿಂದ ಪ್ರೀತಿ, ವಿಶ್ವಾಸದಿಂದ ಕರೆಸಿಕೊಳ್ಳುವ ಏಕೈಕ ವ್ಯಕ್ತಿ ನಾನೊಬ್ಬನೇ. ಅಷ್ಟರಮಟ್ಟಿಗೆ ನಮ್ಮ ಅವರ ನಡುವೆ ಸಂಬಂಧವಿದೆ. ನನಗೆ ರಾಜಕೀಯ ಜನ್ಮ ನೀಡಿದ್ದೇ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ಅವರು ಹೇಳಿದರು.
ಕೆಲವು ಕಿಡಿಗೇಡಿಗಳು ನನಗೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರು ಹಾಗೂ ಬೆಂಬಲಿಗರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಎಂ.ಬಿ.ಶ್ರೀನಿವಾಸ್, ನವೀನ್‍ಕುಮಾರ್, ಎಸ್.ಡಿ.ಜಯರಾಮು, ಅರುಣಜ್ಯೋತಿ, ಇತರ ಮುಖಂಡರು ಉಪಸ್ಥಿತರಿದ್ದರು.







