ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಧರಣಿ

ಬೆಂಗಳೂರು, ಫೆ.10: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಮೀಸಲಿಡಬೇಕು ಹಾಗೂ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದಲ್ಲಿಂದು ಧರಣಿ ನಡೆಸಿದರು.
ಶನಿವಾರ ನಗರದ ಪುರಭವನದ ಎದುರು ಧರಣಿ ನಡೆಸಿದ ನೂರಾರು ಕ್ರೈಸ್ತ ಸಮಯದಾಯದ ಕಾರ್ಯಕರ್ತರು, ಸರಕಾರ ಕ್ರೈಸ್ತ ಸಮುದಾಯಕ್ಕೆ ಯಾವುದೇ ಅನುದಾನ ನೀಡಿಲ್ಲ. ಪ್ರತಿ ಹಂತದಲ್ಲೂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಇನ್ನಾದರೂ ಈ ಅನ್ಯಾಯವನ್ನು ಸರಿಪಡಿಸಬೇಕು ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಮಾತನಾಡಿ, ರಾಜ್ಯದ ಕ್ರೈಸ್ತ ಸಮುದಾಯವನ್ನು ಒಬಿಸಿ ಅಥವಾ ಮೀಸಲಾತಿ ಸಿಗುವ ಪ್ರತ್ಯೇಕ ವರ್ಗಕ್ಕೆ ಸೇರಿಸಬೇಕು. ಸಮುದಾಯದ ಸ್ಥಿತಿ-ಗತಿ ಮತ್ತು ಜನಸಂಖ್ಯೆ ಪರಿಶೀಲಿಸಲು ಪ್ರತ್ಯೇಕ ಆಯೋಗ ರಚನೆ ಮಾಡಬೇಕು ಎಂದ ಅವರು, ಕೇವಲ ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು ಅವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕೈಸ್ತರು ಹಾಗೂ ಅಲ್ಪಸಂಖ್ಯಾತರು ಕೆಲ ವರ್ಗಗಳನ್ನು ಪ್ರವರ್ಗ-1 ಹಾಗೂ ಪ್ರತ್ಯೇಕವಾಗಿ 2 ಬಿ ವರ್ಗಕ್ಕೆ ಸೇರಿಸಿದ್ದಾರೆ. ಆದರೆ, ಕ್ರೈಸ್ತರನ್ನು ಮೇಲ್ವರ್ಗದ ಸಮುದಾಯವಿರುವ ಪ್ರವರ್ಗ 3ಬಿಗೆ ಸೇರಿಸಿದ್ದಾರೆ. ಇದರಿಂದಾಗಿ ಸರಕಾರಿ ಉದ್ಯೋಗ ಹಾಗೂ ಇನ್ನಿತರೆ ಮೀಸಲಾತಿಯಿಂದ ವಂಚಿತರಾಗುತ್ತಿದ್ದೇವೆ.
ಈ ವರ್ಗದಲ್ಲಿ 47 ಉಪಜಾತಿಗಳಿದ್ದು, ಕೆಲ ಉಪ ಜಾತಿಗಳು 40-50 ಲಕ್ಷಜನರಿದ್ದಾರೆ. 2011 ರ ಜನಗಣತಿ ಪ್ರಕಾರ ಕ್ರೈಸ್ತ ಸಮುದಾಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆದುದರಿಂದ ಕ್ರೈಸ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.







