ಮೂಡುಬಿದಿರೆ: 2020, 2024ರ ಒಲಿಂಪಿಕ್ಸ್‌ನ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೂಡುಬಿದಿರೆ, ಫೆ. 10: ಒಲಿಂಪಿಕ್‌ನಲ್ಲಿ ಅತೀ ಹೆಚ್ಚು ಪದಕ ಗೆಲ್ಲುವ ಚಿಂತನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳಿಗೆ ವಿಶೇಷ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಅವರು ಎನ್.ವೈ.ಸಿ.ಎಸ್. ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದೊಂದಿಗೆ ನಡೆಯುವ ಕರ್ನಾಟಕ ಮತ್ತು ಗೋವಾ ರಾಜ್ಯದಿಂದ ಒಲಿಂಪಿಕ್ಸ್ 2020 ಮತ್ತು 2024ರ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನಿಷ್ಠ 8 ಮಂದಿ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆನ್ನುವುದು ನಮ್ಮ ಇಚ್ಛೆ. ಒಂದಾದರೂ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಸಂಸ್ಥೆ ಪರಿಶ್ರಮ ಮಾಡುತ್ತಿದೆ. ಸರ್ಕಾರಗಳಿಗೆ ದೂರದರ್ಶಿತ್ವವಿದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಒಲಿಂಪಿಕ್ಸ್‌ಗೆ ಆಯ್ಕೆಯ ಪ್ರಕ್ರಿಯೆಯಂತಹ ವ್ಯವಸ್ಥೆ ಮಾಡಲು ಸಾಧ್ಯ ಎಂದರು.
ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮಾಜಿ ಸಚಿವ ನಾಗರಾಜ ಶೆಟ್ಟಿ, ಜಿಲ್ಲಾ ಪಂ. ಸದಸ್ಯ ಸುಚರಿತ ಶೆಟ್ಟಿ, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ, ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ಜಗನ್ನಾಥ ಶೆಟ್ಟಿ, ತಾಂತ್ರಿಕ ಅಧಿಕಾರಿ ಅಶೋಕ ಶೀಂದ್ರೆ, ಎನ್.ವೈ.ಸಿ.ಎಸ್. ರಾಜ್ಯ ರಮೇಶ ಕೆ. ಉಪಸ್ಥಿತರಿದ್ದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.





