ಬಲಿಜ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಬೆಂಗಳೂರು, ಫೆ.10: ಬಲಿಜ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಿಜ ಯುವ ಶಕ್ತಿ ಸಂಘದ ಕಾರ್ಯಕರ್ತರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಶನಿವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ಮೆರವಣಿಗೆ ನಡೆಸಿದ ನೂರಾರು ಹೋರಾಟಗಾರರು ತಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಂಘದ ರಾಜ್ಯಾಧ್ಯಕ್ಷ ರಾಜ್ ಕುಮಾರ್, ರಾಜ್ಯದಲ್ಲಿ ಬಲಿಜ ಜನಾಂಗವು ಸುಮಾರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದೆ. ಕೃಷಿ, ಹೈನುಗಾರಿಕೆ, ಹೂ, ಬಳೆ, ಮಂಗಳ ದ್ರವ್ಯಗಳ ಮಾರಾಟ ಹೀಗೆ ಸಣ್ಣ ಕಸುಬುಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಅತ್ಯಂತ ಹಿಂದುಳಿದ ಸಮುದಾಯವಾದ ಬಲಿಜ ಜನಾಂಗವು ಎಲ್ಲಾ ಕ್ಷೇತ್ರದಲ್ಲೂ ಶೋಷಣೆಗೆ ಒಳಪಟ್ಟಿದ್ದು, ಸರಕಾರದಿಂದ ದೊರೆಯುವ ಮೀಸಲಾತಿಯಿಂದಲೂ ವಂಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರದಿಂದಾಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಾಗೂ ಪ್ರವರ್ಗ 2ಎ ಪೂರ್ಣ ಪ್ರಮಾಣದ ಮೀಸಲಾತಿ ಪಡೆಯುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಒಂದು ಸಮುದಾಯ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಬೆಳೆಯಬೇಕಾದರೆ ಮೀಸಲಾತಿ ಎಂಬುದು ಅತ್ಯವಶ್ಯಕವಾದುದ್ದು. ಹೀಗಾಗಿ, ಹಿಂದುಳಿದ ವರ್ಗಗಳಲ್ಲಿ ಗುರುತಿಸಿಕೊಂಡಿರುವ ಬಲಿಜ ಸಮಾಜಕ್ಕೆ ಪ್ರವರ್ಗ 2ಎ ಅಡಿ ಅಗತ್ಯ ನ್ಯಾಯ ಸಿಗಬೇಕಿದೆ. ಈ ಸಂಬಂಧ ಸರಕಾರದಿಂದ ಸೂಕ್ತ ಉತ್ತರ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಅವರು ಹೇಳಿದರು.
ಉಪವಾಸ ಸತ್ಯಾಗ್ರಹದಲ್ಲಿ ಸಂಘದ ಉಪಾಧ್ಯಕ್ಷ ಧನರಾಜ್, ಸಂಘದ ಮುಖಂಡರಾದ ಅಶ್ವತ್ ನಾರಾಯಣ್, ಗುರುಮೂರ್ತಿ, ರಾಧಾ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.







