ಶೇ.90ಕ್ಕಿಂತ ಅಧಿಕ ಕಟ್ಟಡಗಳಿಗೆ ನಕಲಿ ಒಸಿ, ಸಿಸಿ ವಿತರಣೆ: ರಮೇಶ್ ಆರೋಪ

ಬೆಂಗಳೂರು, ಫೆ.10: ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ನಗರದ ವಸತಿ ಸಂಕೀರ್ಣ ಮಾಲ್ ಮಲ್ಟಿಪ್ಲೆಕ್ಸ್ , ಐಟಿ-ಬಿಟಿ ಕಂಪೆನಿಗಳು ಹಾಗೂ ಕೈಗಾರಿಕಾ ಕಟ್ಟಡಗಳಲ್ಲಿ ಶೇ.90 ಕ್ಕೂ ಹೆಚ್ಚು ಕಟ್ಟಡಗಳಿಗೆ ನಕಲಿ ಆಕ್ಯುಪೆನ್ಸಿ ಸರ್ಟಿಫಿಕೆಟ್(ಒಸಿ), ಕೆಮೆನ್ಸ್‌ಮೆಂಟ್ ಸರ್ಟಿಫಿಕೆಟ್(ಸಿಸಿ) ನೀಡಲಾಗಿದೆ ಎಂದು ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸೇರಿ 15 ಸಾವಿರಕ್ಕೂ ಹೆಚ್ಚು ನಕಲಿ ಆಕ್ಯುಪೆನ್ಸಿ ಸರ್ಟಿಫಿಕೆಟ್(ಒಸಿ) ಮತ್ತು ಕೆಮೆನ್ಸ್‌ಮೆಂಟ್ ಸರ್ಟಿಫಿಕೆಟ್(ಸಿಸಿ)ಗಳನ್ನು ಕೊಟ್ಟಿದ್ದಾರೆ. ಇವುಗಳನ್ನು ಕಾನೂನಾತ್ಮಕವಾಗಿ ನೀಡಿದ್ದರೆ 8 ಸಾವಿರ ಕೋಟಿ ರೂ.ಗಳಷ್ಟು ಆದಾಯ ಪಾಲಿಕೆಗೆ ಬರುತ್ತಿತ್ತು. ಆದರೆ, ಈಗ ಕೇವಲ 3500 ಕೋಟಿ ರೂ.ಗಳು ಆದಾಯ ಬಂದಿದ್ದು, ಉಳಿದ ಸಾರ್ವಜನಿಕರ ತೆರಿಗೆ ಹಣವನ್ನು ವಂಚಿಸಲಾಗಿದೆ ಎಂದು ದೂರಿದರು.
ಇದಕ್ಕೆ ಸಂಬಂಧಿಸಿದಂತೆ 6700 ಪುಟಗಳಷ್ಟು ದಾಖಲೆಗಳನ್ನು ಅವರು ಇಂದಿಲ್ಲಿ ಬಿಡುಗಡೆ ಮಾಡಿದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಿರಿಯ ಅಧಿಕಾರಿಗಳು, 668 ಕಟ್ಟಡ ನಿರ್ಮಾಣ ಸಂಸ್ಥೆಗಳ ವಿರುದ್ಧ ಲೋಕಾಯುಕ್ತ, ಎಸಿಬಿ ಹಾಗೂ ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್)ಗೆ ದೂರು ದಾಖಲು ಮಾಡಲಾಗಿದೆ ಎಂದು ವಿವರಿಸಿದರು.
20 ಸಾವಿರಕ್ಕೂ ಅಧಿಕ ಹೊಸ ಸಂಕೀರ್ಣಗಳಿಗೆ ನಕಲಿ ಒಸಿ ಮತ್ತು ಸಿಸಿಗಳನ್ನು ನೀಡಲಾಗಿದೆ. ಶೇ.80 ರಷ್ಟು ಐಟಿ ಕಂಪನಿಗಳು, ಟೆಕ್ ಪಾರ್ಕ್‌ಗಳು, ಮಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು, ಸ್ಟಾರ್ ಹೊಟೇಲ್‌ಗಳಿಗೆ ನಕಲಿ ಸ್ವಾಧೀನ ಅನುಭವ ಪತ್ರಗಳನ್ನು ನೀಡಲಾಗಿದೆ ಎಂದ ಅವರು, 12 ಲಕ್ಷ ಮಂದಿ ಬೀದಿ ಪಾಲಾಗುವಂತೆ ಮಾಡಿರುವ 54 ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳನ್ನು ಬಂಧಿಸಬೇಕು ಹಾಗೂ 668 ಬಿಲ್ಡರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಅವರು ಒತ್ತಾಯಿಸಿದರು.
12ಲಕ್ಷ ಅಧಿಕೃತ ಕಾನೂನು ಬಾಹಿರ ಮಾರಾಟದಿಂದ 668 ಬಿಲ್ಡರ್ ಮಾಫಿಯಾ ಸಂಸ್ಥೆಗಳು 60 ಸಾವಿರ ಕೋಟಿ ರೂ.ಗಳು ಹೆಚ್ಚು ಲಾಭ ಗಳಿಸಿದೆ. ಕಳೆದ ವರ್ಷಗಳಲ್ಲಿ 50,344 ಬೃಹತ್ ವಸತಿ ವಾಣಿಜ್ಯ ಕಟ್ಟಡಗಳು ಪಾಲಿಕೆ ನಗರ ಯೋಜನೆ ಇಲಾಖೆಯಿಂದ ನಕ್ಷೆ ಮಂಜೂರಾತಿ ಪಡೆದಿವೆ. ಇದೇ ಅವಧಿಯಲ್ಲಿ 2600 ಸಿಸಿಗಳನ್ನು ಹಾಗೂ 1438 ಒಸಿಗಳನ್ನು ನೀಡಲಾಗಿದೆ ಎಂದರು.
ಕಳೆದ 18 ವರ್ಷಗಳ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 2129ಬೃಹತ್ ಕಟ್ಟಡಗಳಿಗೆ ಹೊಸ ಸಂಖ್ಯೆ ನೀಡಲಾಗಿದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ 22,500ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3758 ಐಟಿ ಕಂಪನಿಗಳು, 92 ಬಿಟಿ ಕಂಪನಿಗಳು, 79 ಟೆಕ್ ಪಾರ್ಕ್‌ಗಳು, 3 ಸಾವಿರಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಸಂಕೀರ್ಣಗಳು ಹಾಗೂ 114 ಮಾಲ್‌ಗಳು ಮತ್ತು ಮಲ್ಟಿಪೆಕ್ಸ್‌ಗಳಿವೆ. ಇವುಗಳಲ್ಲಿ ಶೇ.90ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಿಗೆ ನಕಲಿ ಸಿಸಿಗಳನ್ನು ನೀಡಲಾಗಿದೆ ಎಂದು ಎನ್.ಆರ್. ರಮೇಶ್ ವಿವರಿಸಿದರು.
ಕಳೆದ ಮೂರು ವರ್ಷಗಳಿಂದೀಚೆಗೆ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಕಲಿ ಒಸಿಗಳನ್ನು ನೀಡಲಾಗಿದೆ. ಇಬ್ಬರು ಜಂಟಿ ನಿರ್ದೇಶಕರ ಕಚೇರಿಯಿಂದ 300ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳಿಗಳಿಗೆ ನಕಲಿ ಒಸಿ ನೀಡಲಾಗಿದೆ ಎಂದ ಅವರು, ರಾಜರಾಜೇಶ್ವರಿ ವಲಯದಲ್ಲಿ ಕಳೆದ 54 ತಿಂಗಳ ಅವಧಿಯಲ್ಲಿ 900ಕ್ಕೂ ಹೆಚ್ಚು ನಕಲಿ ಓಸಿಗಳನ್ನು ನೀಡಲಾಗಿದೆ ಎಂದು ಅವರು ದೂರಿದರು.







