ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ: ಕೆ.ಜೆ.ಜಾರ್ಜ್

ಬೆಂಗಳೂರು, ಫೆ.10: ಬೆಂಗಳೂರು ಮೆಟ್ರೋ ರೈಲು ಹಂತ-2ಬಿ ಅಡಿಯಲ್ಲಿ ನಾಗವಾರ ಮೆಟ್ರೋ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 29.062 ಕಿ.ಮೀ.ಮಾರ್ಗದ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಈ ಕಾಮಗಾರಿಯ ಅಂದಾಜು ವೆಚ್ಚ 5950 ಕೋಟಿ ರೂ.ಗಳು. ಕೇಂದ್ರ ಸರಕಾರದ ಅನುಮೋದನೆ ಪಡೆದ ಕೂಡಲೆ ಈ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ಬಿ ನಾಗವಾರ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮಾರ್ಗದಲ್ಲಿ ಆರ್.ಕೆ.ಹೆಗ್ಡೆ ನಗರ, ಜಕ್ಕೂರು, ಕೋಗಿಲು ಕ್ರಾಸ್, ಚಿಕ್ಕಜಾಲ, ಟ್ರಂಪೆಟ್, ಪಶ್ಚಿಮ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ(ಸ್ಕೈ ಗಾರ್ಡನ್) ಹಾಗೂ ಏರ್‌ಪೋರ್ಟ್ ಟರ್ಮಿನಲ್ ಸೇರಿ 7 ನಿಲ್ದಾಣಗಳು ಇರಲಿವೆ ಎಂದು ಅವರು ತಿಳಿಸಿದ್ದಾರೆ.
5950 ಕೋಟಿ ರೂ.ಗಳ ಈ ಯೋಜನೆಯನ್ನು 42 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಇದುವರೆಗೆ ಈ ಯೋಜನೆಗೆ ಯಾವುದೆ ಅನುದಾನವನ್ನು ಬಳಸಿಕೊಂಡಿಲ್ಲ ಎಂದು ಜಾರ್ಜ್ ಸ್ಪಷ್ಟಣೆ ನೀಡಿದ್ದಾರೆ.







