ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಸೋಲು
ನನಸಾಗದ ಮಿಥಾಲಿರಾಜ್ ಬಳಗದ ಕ್ಲೀನ್ ಸ್ವೀಪ್ ಕನಸು

ಪೊಟ್ಚೆಫ್‌ಸ್ಟ್ರಾಮ್, ಫೆ.10: ದಕ್ಷಿಣ ಆಫ್ರಿಕದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಂತಿಮ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದು, ಆದರೆ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ರವಿವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತಕ್ಕೆ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಗುರಿ ಈಡೇರಲಿಲ್ಲ. ಭಾರತ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡು 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟಾಗಿತ್ತು. ಗೆಲುವಿಗೆ 241 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ 49.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿತು. ಆಫ್ರಿಕ ತಂಡದ ಎಂ ಡು ಪ್ರೀಝ್ ಔಟಾಗದೆ 90 ರನ್ ಮತ್ತು ಡಿ ವ್ಯಾನ್ ನೀಕೆರ್ಕ್ ಔಟಾಗದೆ 41 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವೋಲ್ವಡ್ತ್ 59 ರನ್ ಗಳಿಸಿದರು. ಇದಕ್ಕೂ ಮೊದಲು ಭಾರತ 240 ರನ್‌ಗಳಿಗೆ ಆಲೌಟಾಗಿತ್ತು. ಭಾರತದ ದೀಪ್ತಿ ಶರ್ಮಾ 79 ರನ್ ಮತ್ತು ವೇದಾಕೃಷ್ಣಮೂರ್ತಿ 56 ರನ್, ಎಸ್.ಪಾಂಡೆ ಔಟಾಗದೆ 31 ರನ್, ಹರ್ಮನ್ ಕೌರ್ 25 ರನ್ ಗಳಿಸಿದ್ದರು.
ದಕ್ಷಿಣ ಆಫ್ರಿಕದ ಎಸ್ ಇಸ್ಮಾಯೀಲ್ (30ಕ್ಕೆ 4) ದಾಳಿಗೆ ಸಿಲುಕಿದ ಭಾರತ ಕಠಿಣ ಸವಾಲು ವಿಧಿಸುವಲ್ಲಿ ವಿಫಲಗೊಂಡಿತು.
ಭಾರತ ಅಂತಿಮ ಪಂದ್ಯದಲ್ಲಿ ಸೋತರೂ ಆರು ತಿಂಗಳ ಬಳಿಕ ಭಾರತದ ಮಹಿಳಾ ತಂಡ ಸರಣಿ ಗೆಲುವಿನೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳ ಅಂತರದಲ್ಲಿ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿದ್ದ ಮಹಿಳಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಇನ್ನಷ್ಟು ಬಲಿಷ್ಠ ತಂಡವಾಗಿ ರೂಪುಗೊಂಡಿದೆ.
ಅಂತಿಮ ಪಂದ್ಯದಲ್ಲಿ ಮಹಿಳಾ ತಂಡ ಜಯಿಸಿದ್ದರೆ ಆಫ್ರಿಕ ನೆಲದಲ್ಲಿ ಮೊದಲ ಬಾರಿ 3-0 ಕ್ಲೀನ್ ಸ್ವೀಪ್ ಇತಿಹಾಸ ಬರೆಯುವ ಅವಕಾಶ ಇತ್ತು. ಅದು ಕೈ ತಪ್ಪಿದೆ..







