ತುಮಕೂರು : ಮನೆ ಮನೆಗೆ ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರಿಗಳು

ತುಮಕೂರು,ಫೆ.10 : ತುಮಕೂರು ನಗರ ವಿಧಾನಸಭಾ ಕ್ಷೇತ್ರದ 63 ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್, ಉಪವಿಭಾಗಾಧಿಕಾರಿ ತಿಪೇಸ್ವಾಮಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ನಗರದ ವಿವಿಧ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮತದಾರರ ಪರಿಶೀಲನೆ ನಡೆಸಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು, ತುಮಕೂರು ಉಪವಿಭಾಗಾಧಿಕಾರಿಗಳು ಹಾಗೂ ಪ್ರೋಬೇಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನೊಳಗೊಂಡ ಪ್ರೋಬೇಷನರಿ ಕೆಎಎಸ್ ಅಧಿಕಾರಿಗಳ ತಂಡವನ್ನು ರಚಿಸಿದ್ದು. ವಿವಿಧ ವಾರ್ಡ್‍ಗಳ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾರರ ಪಡಿತರ ಚೀಟಿ,ಆಧಾರ್ ಕಾರ್ಡ್,ಮತದಾರರ ಚೀಟಿಯನ್ನು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರಜಾ ದಿನವಾದ ಶನಿವಾರ ಮತದಾರರ ಪರಿಶೀಲನೆಯನ್ನು ಪ್ರೋಬೇಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್, ತುಮಕೂರು ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಪಾಲಿಕೆ ಉಪ ಆಯುಕ್ತ ಯೋಗಾನಂದ್ ಹಾಗೂ ಮತಗಟ್ಟೆ ಅಧಿಕಾರಿಗಳು ನಗರದ ಕುರಿಪಾಳ್ಯ, ನಜರಾಬಾದ್, ಬನಶಂಕರಿ, ಕಾವೇರಿಸ್ಕೂಲ್, ಒಂಬಕ್ಕಜ್ಜಿ ಕಾಂಪೌಂಡ್, ತಿಲಕ್‍ಪಾರ್ಕ್ ಬಡಾವಣೆ, ಸಿರಾಗೇಟ್, ಎಸ್.ಐ.ಟಿ. ಕುಮುಟಯ್ಯ ಲೇಔಟ್‍ಗಳ ಮನೆಗಳಿಗೆ ಭೇಟಿ ನೀಡಿ ಮತದಾರರ ಪರಿಶೀಲಿಸಿದರು.
ಪ್ರೋಬೇಷನರಿ ಅಧಿಕಾರಿಗಳ ತಂಡವು ದೂರಿನಲ್ಲಿ ತಿಳಿಸಿರುವ 63 ಮತಗಟ್ಟೆಗಳಲ್ಲಿ ಆಯ್ದ ಮತಗಟ್ಟೆಗಳಲ್ಲಿ ನಡೆಸಿದ ಪರಿಶೀಲನೆಯನ್ನು ಮುಂದುವರೆಸಿದ್ದಾರೆ. ಪ್ರೋಬೇಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. 63 ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಬಿಜೆಪಿ ಮುಖಂಡರಾದ ಪಂಚಾಕ್ಷರಯ್ಯ ಎಂಬುವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಜನವರಿ 11ರಿಂದ 17ರವರೆಗೆ ಅಧಿಕಾರಿಗಳು ಹಾಗೂ ಬಿಎಲ್‍ಒಗಳು ಮಹಾನಗರ ಪಾಲಿಕೆ ವ್ಯಾಪ್ತಿಯ ಆಯ್ದ 6 ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮತದಾರರ ಮನೆ ಮನೆಗೆ ತೆರಳಿ 4,674 ಮತದಾರರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿತ್ತು. ಈ ವೇಳೆ ಶೇಕಡಾ 86ರಷ್ಟು ಮತದಾರರು ಸಂಬಂಧಿತ ಮತಗಟ್ಟೆ ವ್ಯಾಪ್ತಿಯಲ್ಲೇ ವಾಸವಿರುವುದು ಹಾಗೂ ಶೇಕಡಾ 7ರಷ್ಟು ಮತದಾರರು ಸ್ಥಳಾಂತರಗೊಂಡಿರುವುದು ಪತ್ತೆಯಾಗಿರುತ್ತದೆ. ಉಳಿದಂತೆ ಮತದಾರರ ಪಟ್ಟಿಯಲ್ಲಿರುವವರಲ್ಲಿ ಶೇಕಡಾ 3 ರಷ್ಟು ಮಂದಿ ಮರಣ ಹೊಂದಿದ್ದರೆ,ಶೇಕಡಾ 4 ರಷ್ಟು ಮತದಾರರ ಗುರುತು ಪತ್ತೆಯಾಗಿರುವುದಿಲ್ಲ ಎಂಬುದು ಪರಿಶೀಲನೆಯಿಂದ ತಿಳಿದು ಬಂದಿದೆ.
ಮತದಾರರ ಹೆಚ್ಚಳದ ಬಗ್ಗೆ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟ್‍ಗಳ ಮೂಲಕ ನಿರ್ದಿಷ್ಟ ಮತದಾರರ ಬಗ್ಗೆ ಅನುಬಂಧ 4.7, 4.8ರಲ್ಲಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ತಿಳಿಸಿದ್ದರು. ಆದರೆ ಬಿಎಲ್‍ಎಗಳ ಮೂಲಕ ಇದುವರೆಗೂ ಒಂದು ದೂರು ದಾಖಲಾಗಿಲ್ಲ.
ಮತದಾರರ ಹೆಚ್ಚಳ ಸಂಬಂಧ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಅವರು ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮತದಾರರ ಪರಿಶೀಲನೆ ನಡೆಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಬಿಎಲ್‍ಒಗಳಿಗೆ ಹಾಗೂ ಸಿಆರ್‍ಪಿಗಳಿಗೆ ಎರಡು ದಿನ ವಿಶೇಷ ತರಬೇತಿಯನ್ನು ನೀಡುವ ಮೂಲಕ ದೋಷ ರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಕ್ರಮ ಕೈಗೊಂಡಿದ್ದಾರೆ.







