ಬಿಐಟಿ: ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಘದಿಂದ ‘ಮೆಕ್ಯಾಟಿಕ್ಸ್’ ಅಂತಾರಾಷ್ಟ್ರೀಯ ಸಮ್ಮೇಳನ

ಮಂಗಳೂರು, ಫೆ.10: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಮಂಗಳೂರು ಇದರ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಶುಕ್ರವಾರ ‘ಮೆಕ್ಯಾಟಿಕ್ಸ್’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಸುರತ್ಕಲ್ ಎನ್‌ಐಟಿಕೆಯ ಪ್ರೊಫೆಸರ್ ಡಾ. ಪ್ರಸಾದ್ ಕೃಷ್ಣ ಮಾತನಾಡಿ, ಒಲವು ಮುಖ್ಯವಲ್ಲ, ನಿಲುವು ಮುಖ್ಯ. ಸಮಸ್ಯೆಗಳನ್ನು ಪರಿಹರಿಸುವ ಇಂಜಿನಿಯರ್‌ಗಳಿಗೆ ವಿಶ್ವದಲ್ಲಿ ಬೇಡಿಕೆಯಿದೆ. ಹೊಸ ಹೊಸ ವಿಷಯಗಳನ್ನು ಸ್ವೀಕರಿಸಿ, ನೂತನ ಮಾಹಿತಿಗಳನ್ನು ಸಂಗ್ರಹಿಸಿ ತಮ್ಮ ಕಾರ್ಯದಲ್ಲಿ ಅಳವಡಿಸಿಕೊಳ್ಳುವ ಇಂಜಿನಿಯರ್‌ಗಳು ಯಶಸ್ಸನ್ನು ಸಾಧಿಸುತ್ತಾರೆ ಎಂದರು.
ವಿದ್ಯಾರ್ಥಿಗಳು ದೃಢ ಮನೋಭಾವ, ಕೌಶಲ್ಯ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸಂವಹನ ಕಲೆ, ತಾಂತ್ರಿಕ ಕೌಶಲ್ಯ, ಬರವಣಿಗೆ ಕೌಶಲ್ಯ, ಆಡಳಿತಾತ್ಮಕ ಕೌಶಲ್ಯ, ವೃತ್ತಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದವರು ಹೇಳಿದರು.
ಪ್ರಾಂಶುಪಾಲ ಡಾ. ಎ.ಜೆ. ಅಂಟೋನಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿವೇಕಾನಂದ ಬಿ. ಹುದ್ದಾರ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮುಹಮ್ಮದ್ ಹಸನ್ ಹಾಗೂ ಉಬೈದುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಹಥೀಮ್ ಸಿನನ್ ವಂದಿಸಿದರು. ನಿಹಾಲ್ ಹಾಗೂ ಫರ್ಹಾನ್ ಸಹಕರಿಸಿದರು.







