ಅಹಿಂದ ವರ್ಗದ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ : ಅಹಿಂದ ಒಕ್ಕೂಟ ನಿರ್ಧಾರ

ಮಡಿಕೇರಿ,ಫೆ.11 :ಕೊಡಗು ಜಿಲ್ಲಾ ಅಹಿಂದ ಒಕ್ಕೂಟದಲ್ಲಿ ವಿವಿಧ ಸಮಾಜಗಳ ಸುಮಾರು 22 ಸಾವಿರ ಮಂದಿ ಸದಸ್ಯತ್ವವನ್ನು ಹೊಂದಿದ್ದು, ಒಕ್ಕೂಟ ಅತ್ಯಂತ ಬಲಿಷ್ಠವಾಗಿದೆ. ಅಹಿಂದ ವರ್ಗದ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಲು ಒಕ್ಕೂಟದ ಎರಡನೇಯ ಹಂತದ ನಾಯಕರುಗಳು ಜವಬ್ದಾರಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅಹಿಂದ ಸಮುದಾಯಗಳ ಸಮಸ್ಯೆಗಳ ನಿವಾರಣೆಗೆ ಅಹಿಂದ ಸಮುದಾಯಗಳು ಒಗ್ಗೂಡಬೇಕು. ನಮ್ಮ ಮುಂದಿನ ಅಭ್ಯುದಯದ ಬಗ್ಗೆ ಉತ್ತಮ ಚರ್ಚೆ ಮತ್ತು ಚಿಂತನೆ ನಡೆಯಬೇಕು ಎಂದರು.
ಮನೆ ಬಾಗಿಲಿಗೆ ಬರುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ ಅಸಡ್ಡೆ ತೋರುತ್ತಿದ್ದು, ಅಹಿಂದ ವರ್ಗ ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಕರೆ ನೀಡಿದರು.
ಒಕ್ಕೂಟದಲ್ಲಿ ಯಾವುದೇ ರಾಜಕಾರಣ ನುಸುಳಬಾರದು, ಪಕ್ಷ ರಾಜಕಾರಣ ಅವರವರ ವೈಯಕ್ತಿಕ ವಿಚಾರ ಎಂದು ರಮೇಶ್ ಸ್ಪಷ್ಟಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಕಳೆದ ಸಾಲಿನ ವರದಿ ಮಂಡಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮುದ್ದಯ್ಯ, ಅಹಿಂದ ಒಕ್ಕೂಟದಲ್ಲಿ ಎಲ್ಲಾ ಸಮುದಾಯಗಳ ಮುಖಂಡರು ಸಕ್ರಿಯರಾದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, 1991 ರ ನವೆಂಬರ್ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಅಹಿಂದ ಒಕ್ಕೂಟ ಹಲವು ಹೋರಾಟಗಳಲ್ಲಿ ಯಶಸ್ಸನ್ನು ಕಂಡಿದೆ. ಜಿಲ್ಲೆಯಲ್ಲಿ ಮೂರ್ನಾಲ್ಕು ಸಮ್ಮೇಳನಗಳನ್ನು ಆಯೋಜಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಮುಂದಿನ ದಿನಗಳಲ್ಲೂ ಒಕ್ಕುಟದ ವತಿಯಿಂದ ಅಹಿಂದ ವರ್ಗದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಸಮಾಜಗಳ ಮುಖಂಡರು ಒಕ್ಕೂಟದ ಮುಂದಿನ ಕಾರ್ಯ ಯೋಜನೆಗಳ ಕುರಿತು ಸಲಹೆ ಸೂಚನೆ ನೀಡಿದರು. ಹಾಗೂ ತಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಒಕ್ಕೂಟದ ಗಮನಕ್ಕೆ ತಂದರು. ಫೋಟೋ :: ಅಹಿಂದ







