ಯುವಜನತೆ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಬೇಕಿದೆ : ಎಸ್.ಪಿ.ಮುದ್ದಹನುಮೇಗೌಡ

ತುಮಕೂರು.ಫೆ.11:ಯುವಕರು ಕಾಂಗ್ರೆಸ್ ಪಕ್ಷವನ್ನು ರಕ್ಷಿಸಿದರೆ,ನಿಮ್ಮನ್ನು ಪಕ್ಷ ರಕ್ಷಿಸುತ್ತದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‍ವತಿಯಿಂದ ಪಕ್ಷಕ್ಕೆ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಆಯೋಜಿಸಿದ್ದ “ಯುವಕರ ನಡಿಗೆ ಕಾಂಗ್ರೆಸ್ ಕಡೆಗೆ”ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಯುವಜನರ ಮೇಲೆ ಪಕ್ಷ ಬಹಳ ನಂಬಿಕೆಯನ್ನು ಹೊಂದಿದೆ.ನೀವು ಪಕ್ಷವನ್ನು ಬಲಪಡಿಸಿದರೆ,ಮುಂದಿನ ಚುನಾವಣೆಗಳಲ್ಲಿ ನಾಯಕರುಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಯುವಜನರಿಂದ ಶೇ100ರಷ್ಟು ಮತದಾನ ಪ್ರಕ್ರಿಯೆ ನಡೆಯುವಂತೆ ಮಾಡಲು ಸಾಧ್ಯ. ತಮ್ಮ ವಾರ್ಡು, ಬೂತ್‍ಗಳಲ್ಲಿರುವ ಮತದಾರರ ಮತಗಟ್ಟೆಗೆ ಬಂದ ಮತದಾನ ಮಾಡುವಂತೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ.ಯುವಜನತೆಯೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಇದ್ದಂತೆ.ಸಮಾಜವನ್ನು ಒಡೆಯಲು ವಿಚಿದ್ರಕಾರಿ ಶಕ್ತಿಗಳ ಕಾಯುತ್ತಿದ್ದು, ಚುನಾವಣೆ ಕಾಲದಲ್ಲಿ ಅದು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಯುವಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕು.ಸಮಾಜದಲ್ಲಿ ಶಾಂತಿ ಕಾಪಾಡಲು ನಾವೆಲ್ಲರೂ ಕೈಜೋಡಿಸಬೇಕೆಂದು ಸಂಸದ ಮುದ್ದಹನುಮೇಗೌಡ ತಿಳಿಸಿದರು.
ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಯುವಕಾಂಗ್ರೆಸ್ ಕಾರ್ಯಕರ್ತರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.2013ರ ಚುನಾವಣೆಯಲ್ಲಿ ನನ್ನನ್ನು ಸೇರಿದಂತೆ ತುಮಕೂರು ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ಯುವಕರಿಗೆ ಟಿಕೇಟ್ ನೀಡಲಾಗಿತ್ತು. ಈ ಬಾರಿ 5 ಜನ ಯುವಕರಿಗೆ ಟಿಕೆಟ್ ದೊರೆಯುವ ನಿರೀಕ್ಷೆಯಿದೆ. ಅಲ್ಲದೆ ಮುಂಬರುವ ಸ್ಥಳೀಯ ಸಂಸ್ಥೆ, ಲೋಕಸಭಾ ಚುನಾವಣೆಯಲ್ಲಿಯೂ ಯುವಕರಿಗೆ ಹೆಚ್ಚಿನ ಅದ್ಯತೆ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಹುಲ್‍ಗಾಂಧಿ ಮುಂದಾಗಿದ್ದಾರೆ. ಅದಕ್ಕಾಗಿ ಯುವಜನರನ್ನು ಪಕ್ಷಕ್ಕೆ ಸೆಳೆಯುವ ಉದ್ದೇಶದಿಂದ ನಮ್ಮ ಕರ್ನಾಟಕ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ತುಮಕೂರು ಸೇರಿದಂತೆ ಆಯ್ದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದರು.
ಇಂದು ದೇಶ, ವಿದೇಶಗಳಲ್ಲಿ ಲಕ್ಷಾಂತರ ಮಂದಿ ಸಾಫ್ಟ್ ವೇರ್ ಇಂಜಿನಿಯರ್ಸ್‍ಗಳು,ವೈದ್ಯರು ಕೆಲಸ ಮಾಡುತ್ತಿದ್ದರೆ ಅದಕ್ಕೆ ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಅವರು ಜಾರಿಗೆ ತಂದು ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಯೋಜನೆಗಳು ಅಲ್ಲದೆ ಯುವಕರು ಸಕ್ರಿಯವಾಗಿ ರಾಜಕಾರಣದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದರು.ಆದ್ದರಿಂದ ಯುವಜನರು ಸಕ್ರಿಯವಾಗಿ ಚುನಾವಣೆಯಲ್ಲಿ ಪಾಲ್ಗೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಯುವಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್, ನಗರ ಅಧ್ಯಕ್ಷ ಅನಿಲ್, ಜೈನ್ ಶೇಕ್ ಫಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







