ಮಾಲಿನ್ಯ ನಿಯಂತ್ರಣಕ್ಕೆ ಸರಕಾರದೊಂದಿಗೆ ಕೈಜೋಡಿಸಿ: ಸಾರಿಗೆ ಸಚಿವ ಎಚ್.ಎಂ.ರೇವಣ್ಣ
‘ವಿರಳ ಸಂಚಾರ ದಿನ’ಕ್ಕೆ ಚಾಲನೆ

ಬೆಂಗಳೂರು, ಫೆ. 11: ಸಾರ್ವಜನಿಕರು ತನ್ನ ಸ್ವಂತ ವಾಹನಗಳನ್ನು ನಿಲ್ಲಿಸಿ ಸಮೂಹ ಸಾರಿಗೆ ವಾಹನಗಳನ್ನು ಬಳಸುವ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯ ಸರಕಾರದೊಂದಿಗೆ ಕೈಜೋಡಿಸಬೇಕೆಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮನವಿ ಮಾಡಿದ್ದಾರೆ.
ರವಿವಾರ ವಿಧಾನಸೌಧದ ಮುಂಭಾಗದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ‘ವಿರಳ ಸಂಚಾರ ದಿನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ತಿಂಗಳ 2ನೆ ರವಿವಾರ ಸಂಚಾರ ದಿನವನ್ನಾಗಿ ಆಚರಣೆ ಮಾಡಲಾಗುವುದು ಎಂದು ಪ್ರಕಟಿಸಿದರು.
ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ ಹಾಗೂ ಇಂಧನ ಉಳಿತಾಯಕ್ಕಾಗಿ ಸಾರ್ವಜನಿಕರ ಸಹಕಾರದೊಂದಿಗೆ ವಿರಳ ಸಂಚಾರ ದಿನ ಆಚರಣೆ ಮಾಡಲಾಗುತ್ತಿದೆ ಎಂದ ಅವರು, ದಿಲ್ಲಿಯಂತೆ ಬೆಂಗಳೂರು ನಗರದಲ್ಲಿ ಸಮಸ್ಯೆ ಸೃಷ್ಟಿಯಾಗಬಾರದೆಂದು ಮುನ್ನಚ್ಚರಿಕೆಯಾಗಿ ಈ ಕ್ರಮ ಕೈಕೊಳ್ಳಲಾಗಿದೆ ಎಂದರು.
52ಲಕ್ಷ ಸ್ವಂತ ವಾಹನಗಳು: ಬೆಂಗಳೂರು ನಗರದಲ್ಲಿ ಈಗಾಗಲೇ 82 ಲಕ್ಷ ವಾಹನಗಳು ಸಂಚರಿಸುತ್ತಿದ್ದು, ಆ ಪೈಕಿ 52 ಲಕ್ಷ ಸ್ವಂತ ವಾಹನಗಳಾಗಿವೆ. ಇದರಿಂದ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದರ ನಿಯಂತ್ರಣಕ್ಕೆ ಸಮೂಹ ಸಾರಿಗೆ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಸಮೂಹ ಸಾರಿಗೆ ವಾಹನಗಳಲ್ಲಿ ಸಂಚರಿಸುಲು ಅವಕಾಶ ಕಲ್ಪಿಸಲು ನಗರ ಸಾರಿಗೆ ಬಸ್ ದರವನ್ನು ವಿರಳ ಸಂಚಾರ ದಿನ ರಿಯಾಯಿತಿ ನೀಡಲಾಗಿದೆ ಎಂದ ಅವರು, ‘ವಿರಳ ಸಂಚಾರ ದಿನ’ ಆಚರಣೆಯಲ್ಲಿ ಬದಲಾವಣೆಗಳು ಅಗತ್ಯವಿದ್ದಲ್ಲಿ ಚರ್ಚೆ ಸಿದ್ಧ ಎಂದು ಹೇಳಿದರು.
ವಿರಳ ಸಂಚಾರ ದಿನದಂದು ಹೆಚ್ಚು-ಹೆಚ್ಚು ನಗರ ಸಾರಿಗೆ ಬಸ್‌ಗಳು, ಮೆಟ್ರೋ, ಸಂಚರಿಸಲಿವೆ. ಸಾರ್ವಜನಿಕರು ವಿದ್ಯುತ್ ಚಾಲಿತ ವಾಹನಗಳು ಹಾಗೂ ಸೈಕಲ್‌ಗಳನ್ನು ಬಳಸಬೇಕು. ಅಲ್ಲದೆ, ಕಡಿಮೆ ಅಂತರದ ಸ್ಥಳಗಳಿಗೆ ಸಾರ್ವಜನಿಕರೇ ನಡೆದೆ ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಮಾತನಾಡಿ, ದೇಶದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ‘ವಿರಳ ಸಂಚಾರ ದಿನ’ಕ್ಕೆ ಚಾಲನೆ ನೀಡಲಾಗಿದೆ. ವಿದ್ಯುತ್ ಚಾಲಿತ ನಗರ ಸಂಚಾರ ಬಸ್‌ಗಳ ಖರೀದಿಸಲು ಉದ್ದೇಶಿಸಿದ್ದು, ಶೀಘ್ರದಲ್ಲೆ ಆ ಬಸ್‌ಗಳು ಸಂಚರಿಸಲಿವೆ. ಮಾಲಿನ್ಯ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದರು.
ವಿರಳ ಸಂಚಾರ ದಿನಾಚರಣೆ ಮೂಲಕ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಸಾರ್ವಜನಿಕರು ಸಂಚಾರಕ್ಕಾಗಿ ಸಮೂಹ ಸಾರಿಗೆ ವಾಹನಗಳನ್ನು ಬಳಸಲು ಪ್ರೋತಾಹಿಸಲಾಗುವುದು ಎಂದು ಓಲಾ ಕಂಪೆನಿ ಪ್ರಧಾನ ವ್ಯವಸ್ಥಾಪಕ ವಿಷ್ಣು ಬೊಮ್ಮರೆಡ್ಡಿ ತಿಳಿಸಿದರು.
ವಿರಳ ಸಂಚಾರ ದಿನದ ಅಂಗವಾಗಿ ವಿಧಾನಸೌಧದಿಂದ ವಿದ್ಯುತ್ ಚಾಲಿತ ಕಾರುಗಳು ಹಾಗೂ ಸೈಕಲ್ ಜಾಥಾ ಏರ್ಪಡಿಸಲಾಗಿತ್ತು. ವಿಧಾನಸೌಧ, ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ವೃತ್ತ, ನೃಪತುಂಗ ರಸ್ತೆ ಮೂಲಕ ಕಂಠೀರವ ಕ್ರೀಡಾಂಗಣದಲ್ಲಿ ಜಾಥಾ ಮುಕ್ತಾಯಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಟಿ ರೂಪಿಕಾ, ಅನೂಪ್ ರೇವಣ್ಣ, ಮೇಯರ್ ಸಂಪತ್ ರಾಜ್, ವಿಧಾನ ಪರಿಷತ್ ಸದಸ್ಯ ರಮೇಶ್, ಮಾಜಿ ಮೇಯರ್ ಹುಚ್ಚಪ್ಪ, ಭೈರವ ಸಿದ್ದರಾಜು, ಸಾರಿಗೆ ಇಲಾಖೆ ಕಾರ್ಯದರ್ಶಿ ಬಸವರಾಜು, ಆಯುಕ್ತ ದಯಾನಂದ ಹಾಜರಿದ್ದರು.
‘ಮಾಲಿನ್ಯ ನಿಯಂತ್ರಣಕ್ಕೆ ಬಜೆಟ್‌ನಲ್ಲಿ 300 ಕೋಟಿ ರೂ.ಮೀಸಲಿಡಲಾಗುವುದು. ಮಾಲಿನ್ಯ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಿ, ವಾಹನಗಳಿಂದ ಆಗುವ ಮಾಲಿನ್ಯದ ಪ್ರಮಾಣವನು ಗುರುತಿಸಲು ಪರೀಕ್ಷೆ ನಡೆಸಲಾಗುವುದು. ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ಬೈಕ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು’
-ಸಂಪತ್‌ರಾಜ್, ಬಿಬಿಎಂಪಿ ಮೇಯರ್







