ರಂಗಕರ್ಮಿ ಚಿಕ್ಕಸುರೇಶ್ ನಿಧನ
ಬೆಂಗಳೂರು, ಫೆ. 11: ಅನಾರೋಗ್ಯದ ಹಿನ್ನೆಲೆಯಲ್ಲಿ ರಂಗಭೂಮಿ ಕಲಾವಿದ ಹಾಗೂ ಸಾಕ್ಷಚಿತ್ರ ನಿರ್ದೇಶಕ ಚಿಕ್ಕಸುರೇಶ್ (53) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ರಂಗಭೂಮಿ ಗೆಳೆಯರನ್ನು ಅವರು ಅಗಲಿದ್ದಾರೆ. ತೆರೆದ ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಸುರೇಶ್, ಇತ್ತೀಚೆಗೆ ಕುಟುಂಬ ಸಮೇತ ಗೋವಾಕ್ಕೆ ಪ್ರವಾಸ ತೆರಳಿದ್ದರು. ಈ ವೇಳೆ ಅನಾರೋಗ್ಯಕ್ಕೀಡಾಗಿದ್ದು, ಅಲ್ಲಿಂದ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರುವ ಸಂದರ್ಭದಲ್ಲಿ ಅಸುನೀಗಿದ್ದಾರೆಂದು ತಿಳಿದುಬಂದಿದೆ.
ಚಿರಸ್ಮರಣೆ, ಸಂಕ್ರಾಂತಿ, ಉಳ್ಳವರು ನೆರಳು ಮತ್ತು ಕಿಂಗ್‌ಲಿಯರ್ ಸೇರಿದಂತೆ ನೂರಕ್ಕೂ ಹೆಚ್ಚು ರಂಗರೂಪಕಗಳನ್ನು ರೂಪಿಸಲು ಸುರೇಶ್ ಶ್ರಮಿಸಿದ್ದರು. ರಾಜ್ಯಾದ್ಯಂತ ಸಂಚರಿಸಿ ಹತ್ತಾರು ಬೀದಿನಾಟಕಗಳ ನೂರಾರು ಪ್ರದರ್ಶನಗಳನ್ನು ನೀಡಿದ್ದರು.
ಕುರುಬನ ರಾಣಿ, ನಂದಿ, ತಾಯಿಯ ಕರುಳು, ಒಗ್ಗರಣೆ ಸಿನಿಮಾಗಳಲ್ಲಿ ನಟಿಸಿದ್ದ ಸುರೇಶ್ ಸಿನಿರಂಗದಲ್ಲೂ ತನ್ನ ಹೆಜ್ಜೆಗುರುತು ಮೂಡಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಾಡಿನ ಎಲೆಮರೆ ಕಾಯಿಯಂತಿದ್ದ ಹೆಸರಾಂತ ಸಾಹಿತಿಗಳ ಕುರಿತು ಸಾಕ್ಷಚಿತ್ರಗಳನ್ನು ಸುರೇಶ್ ತಯಾರಿಸಿದ್ದರು.
ಇಲ್ಲಿನ ಹೊಸಕೆರೆಯಲ್ಲಿ ನಿವಾಸಿಯಾದ ಸುರೇಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹನುಮಂತನಗರದ ಕೆ.ಎಚ್.ಕಲಾಸೌಧದ ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಆ ಬಳಿಕ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದ ಸದಸ್ಯರ ತಿಳಿಸಿದ್ದಾರೆ.







