ಕೊಪ್ಪಳ : ಭದ್ರತೆಯನ್ನು ಲೆಕ್ಕಿಸದೆ ರಾಹುಲ್ ಗಾಂಧಿ ಯುವಕನೊಬ್ಬನ ಬಳಿ ತೆರಳಿದ್ದೇಕೆ ?

ಕೊಪ್ಪಳ (ಕುಷ್ಟಗಿ), ಫೆ.11: ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವ ಸಂಕಲ್ಪದೊಂದಿಗೆ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಎರಡನೆಯ ದಿನದಂದು ಹೈದರಾಬಾದ್ - ಕರ್ನಾಟಕ ಭಾಗದ ಪ್ರಮುಖ ನಗರ-ಪಟ್ಟಣಗಳಲ್ಲಿ ನಡೆದ ರೋಡ್ ಶೋ ಜನಸಾಗರವೇ ಹರಿದುಬಂದಿತ್ತು.
ರವಿವಾರ ಕೊಪ್ಪಳ ಜಿಲ್ಲೆಯ ಯಲಬುರ್ಗ ನಗರದ ಕುಷ್ಠಗಿ ಪಟ್ಟಣಗಳಲ್ಲಿ, ನಂತರ ಅಲ್ಲಿಂದ ಬಂಡಿಕ್ರಾಸ್ ಮೂಲಕ ಹಳ್ಳಿ ಹಳ್ಳಿಗಳನ್ನು ಹಾದು ಕುಷ್ಠಗಿಗೆ ಬಂದ ರಾಹುಲ್‌ಗಾಂಧಿ ಅವರು, ಅಬ್ಬರದ ರೋಡ್ ಶೋ ನಡೆಸಿದರು.
'ಯುವಕನೊಬ್ಬನನ್ನು ಸಂತೈಸಿದ ರಾಹುಲ್'
ತನ್ನನ್ನು ನೋಡಲೆಂದು ಆಗಮಿಸಿ ಜನಸಂದಣಿಯಲ್ಲಿ ಸಿಕ್ಕಿಬಿದ್ದು ಪೊಲೀಸರ ನೂಕಾಟದಿಂದ ಕೆಳಗೆ ಬಿದ್ದ ಯುವಕನೊಬ್ಬನ ಬಳಿ ಭದ್ರತೆಯನ್ನು ಲೆಕ್ಕಿಸದೆ ತೆರಳಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂತೈಸಿದ ಘಟನೆ ಕುಷ್ಟಗಿಯಲ್ಲಿ ನಡೆಯಿತು.
ಯಲಬುರ್ಗದಿಂದ ಕುಷ್ಠಗಿಗೆ ಬಂದ ರಾಹುಲ್ ಗಾಂಧಿ ಅವರಿಗೆ ಕುಷ್ಠಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದ್ದು, ಡೋಲು, ತಮಟೆ ಭಾರಿಸುವ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಪೂರ್ಣಕುಂಭದ ಸ್ವಾಗತ ಕೋರಿದರು.
ಲಂಬಾಣಿ ಸಮುದಾಯದ ನೂರಾರು ಮಹಿಳೆಯರು ಸಾಂಪ್ರದಾಯಿಕ ಲಂಬಾಣಿ ವೇಷ ತೊಟ್ಟು ವಿಶೇಷ ನೃತ್ಯದ ಮೂಲಕ ರಾಹುಲ್‌ಗಾಂಧಿ ಅವರಿಗೆ ಸ್ವಾಗತ ಕೋರಿದರು.
ರಾಹುಲ್‌ಗಾಂಧಿ ಅವರ ಈ ರೋಡ್ ಶೋ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಕುಷ್ಠಗಿ ಪಟ್ಟಣದಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕುವರೆಗೂ ಇರುವ ಹಳ್ಳಿ ಗಳಲ್ಲಿ ನೂರಾರು ಮಂದಿ ರಸ್ತೆಯಲ್ಲಿ ಸಾಲುಗಟ್ಟಿ ನಿಂತು ರಾಹುಲ್‌ಗಾಂಧಿ ಅವರತ್ತ ಕೈ ಬೀಸಿ ಖುಷಿಪಟ್ಟರು
ರಾಹುಲ್‌ಗಾಂಧಿ ಅವರ ಈ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಬಸವರಾಯರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಸ್ಥಳೀಯ ಶಾಸಕರು, ಮುಖಂಡರು ಜತೆಗಿದ್ದರು.
ದೇವಸ್ಥಾನಕ್ಕೆ ಭೇಟಿ
ಮಠ-ದೇವಾಲಯಗಳ ಭೇಟಿ ಮುಂದುವರೆಸಿರುವ ರಾಹುಲ್ ಗಾಂಧಿ, ಕೊಪ್ಪಳ ಜಿಲ್ಲೆ ಕನಕಗಿರಿಯ ಐತಿಹಾಸಿಕ ದೇವಾಲಯ ಕನಕಾಚಲ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ, ವಿಷೇಶ ಪೂಜೆ ಸಲ್ಲಿಸಿದರು.
ಜೆಡಿಎಸ್ ಭದ್ರ ಕೋಟೆಯಲ್ಲಿ ಅದ್ದೂರಿ ಸ್ವಾಗತ!
ಜೆಡಿಎಸ್ ಪಕ್ಷದ ಭದ್ರಕೋಟೆಯೇ ಎಂದು ಹೇಳಲಾಗುವ ಗಂಗಾವತಿಯಲ್ಲಿ ಎಐಸಿಸಿ ರಾಹುಲ್ ಗಾಂಧಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಜೆಡಿಎಸ್ ನಿಂದ ಅಮಾನತುಗೊಂಡಿರುವ ಗಂಗಾವತಿ ಶಾಸಕ ಇಕ್ಬಾಲ್ ಅನ್ಸೂರಿ ಅವರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರನ್ನು ಸ್ವಾಗತಿಸಿದರು.







