ಕಾವಿ ತೊಟ್ಟವರಿಂದ ಭಾರತ ಹಾಳಾಗಿದೆ : ಬಸವ ಕಬೀರ್ ಸ್ವಾಮೀಜಿ
ಬೆಂಗಳೂರು, ಫೆ.11: ನಮ್ಮ ದೇಶ ಖಾದಿ ತೊಟ್ಟವರಿಂದ ಮಾತ್ರವಲ್ಲ, ಕಾವಿ ತೊಟ್ಟವರಿಂದಲೂ ಹಾಳಾಗಿದೆ. ಜಾತಿ-ಧರ್ಮಗಳನ್ನು ಮೀರಿದವರು ಸ್ವಾಮಿಯಾಗುತ್ತಾರೆ ಹೊರತು, ಬೆಂಕಿ ಹಚ್ಚಿ ಸಮಾಜದ ಸ್ವಾಸ್ಥ ಹಾಳು ಮಾಡುವವರು ಸ್ವಾಮಿಯಾಗಲು ಅರ್ಹರಲ್ಲ ಎಂದು ಕಲಬುರ್ಗಿಯ ಸಿದ್ದಬಸವ ಕಬೀರ್ ಸ್ವಾಮೀಜಿ ಇಂದಿಲ್ಲಿ ಹೇಳಿದ್ದಾರೆ.
ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಂವಾದ ಸಂಸ್ಥೆಯ 25 ನೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮದಲ್ಲಿ 'ಸಾಮಾಜಿಕ ನ್ಯಾಯಕ್ಕಾಗಿ ಯುವ ಮುಂದಾಳತ್ವ' ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲರಿಗೂ ಸೇರಿದ ದೇಶ ಭಾರತ. ಯಾರಲ್ಲಿ ಮಾನವೀಯ ಮೌಲ್ಯಗಳು ಇರುತ್ತದೋ ಅವರದ್ದು ಈ ದೇಶ ಎಂದರು.
ಇತ್ತೀಚಿಗೆ ಧರ್ಮದ ಹೆಸರಲ್ಲಿ ಸಮಾಜದಲ್ಲಿ ಅತ್ಯಾಚಾರ-ಅನಾಚಾರ ಹೆಚ್ಚುತ್ತಿದ್ದು, ಇವತ್ತಿನ ಸ್ವಾಮಿಗಳು ರಾಜಕೀಯಕ್ಕೆ ಬಂದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಧ್ವೇಷದ ಬೆಂಕಿ ಹಚ್ಚಿ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಇದಕ್ಕೆ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದ ಅವರು, ಪಶು, ಪಕ್ಷಿ ಸೇರಿದಂತೆ ಭೂಮಿಯಲ್ಲಿರುವ ಎಲ್ಲವನ್ನೂ ಪ್ರೀತಿಸುವವ ಮನುಷ್ಯನಾಗುತ್ತಾನೆ ಹೊರತು ಹಸುವನ್ನು ಪೂಜೆ ಮಾಡುವುದರಿಂದಲ್ಲ. ಭಾರತ್ ಮಾತಾಕಿ ಜೈ ಎನ್ನುವುದು ದೇಶಪ್ರೇಮವಲ್ಲ. ಬದಲಿಗೆ ದೇಶದಲ್ಲಿರುವ ಮನುಷ್ಯರನ್ನು ಸಮಾನ ಭಾವದಿಂದ ಕಾಣುವುದೇ ದೇಶಪ್ರೇಮ ಎಂದು ನುಡಿದರು.
ಪತ್ರಕರ್ತ ಟಿ.ಕೆ.ದಯಾನಂದ್ ಮಾತನಾಡಿ, ನಮ್ಮ ಪ್ರತಿಪಾದನೆಯನ್ನು ವಿರೋಧಿಸುವ ಚಿಂತನೆಯುಳ್ಳವರನ್ನು ನಮ್ಮ ವಿರೋಧಿಗಳೆಂದು ಭಾವಿಸದೇ ಅವರ ಮಧ್ಯೆಯೇ ಇದ್ದು ಅವರನ್ನೇ ಪ್ರಶ್ನಿಸುವಂತಾಗಬೇಕು. ಮಾಧ್ಯಮ ರಾಜಕೀಯದಿಂದ ಮುಕ್ತವಾಗಿದ್ದಾಗ ನ್ಯಾಯಯುತ ಸುದ್ದಿಯನ್ನು ನೀಡಲು ಸಾಧ್ಯ. ಯಾವುದೇ ಲಾಬಿಗೆ ಒಳಗಾಗದೇ ಸುದ್ದಿಯ ಮೌಲ್ಯವನ್ನು ಅರಿತು ಪತ್ರಿಕೋದ್ಯಮಕ್ಕೆ ನ್ಯಾಯ ಒದಗಿಸುವ ಬದ್ಧತೆ ಇರಬೇಕು ಎಂದರು.
ಜವಾಬ್ದಾರಿಯುತ ಯುವಜನರ ಸಹಕಾರದಿಂದ ಸ್ವತಂತ್ರ ಮಾಧ್ಯಮ ಯಶಸ್ವಿಯಾಗುತ್ತದೆ. ಯಾವುದೇ ಸುಳ್ಳು ಸುದ್ದಿಗಳಿಗೆ ಮುರುಳಾಗದೇ ನಮಗೆ ಯಾವ ರೀತಿಯ ಸುದ್ದಿಗಳು ಬೇಕು ಎಂಬುದನ್ನು ನಿರ್ಧರಿಸಬೇಕು. ಅಲ್ಲದೆ, ಸುದ್ದಿಯಲ್ಲಿ ವಸ್ತು ನಿಷ್ಠತೆಯನ್ನು ಪರೀಕ್ಷೆ ಮಾಡುವುದನ್ನು ನಾವು ಅರಿಯಬೇಕು ಎಂದು ಸಲಹೆ ನೀಡಿದರು.
ದಲಿತ ದಮನಿತರ ಹೋರಾಟ ವೇದಿಕೆಯ ಹುಲಿಕುಂಟೆ ಮೂರ್ತಿ ಮಾತನಾಡಿ, ಸಂವಾದ ಸಂಸ್ಥೆಯ ಹೊಡನಾಟದೊಂದಿಗೆ ಸಮಾಜದಲ್ಲಿರುವ ಅಸಮಾನತೆ, ಅನ್ಯಾಯಗಳ ಕುರಿತು ಚಿಂತನೆ ಮಾಡುವುದಕ್ಕೆ ವೇದಿಕೆ ಕಲ್ಪಿಸಿದ ಪರಿಣಾಮ ನಾನಿಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲಿ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಹುಜನ ದ್ಯಾರ್ಥಿ ಸಂಘದ ಪಾರ್ವತಮ್ಮ ಬೆಟ್ಟಕೋಟೆ, ವಿದ್ಯಾರ್ಥಿ ಅರ್ಜುನ್, ಸಿಗ್ನಾ ಸಂಸ್ಥೆಯ ಲೋಹಿತ್, ರೈತಸಂಘದ ಗಿರೀಶ್ ಎಸ್.ಬೇಡರಪುರ, ಸಖಿ ಸಂಸ್ಥೆಯ ದುರ್ಗಾರಾಣಿ, ಬದುಕು ಕಮ್ಯುನಿಟಿ ಕಾಲೇಜಿನ ಪ್ರಾಂಶುಪಾಲ ಮುರಳಿ ಮೋಹನ್ ಕಾಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







