ವೈದ್ಯರ ಕೊರತೆ ನೀಗಿಸಲು ‘ಬ್ರಿಡ್ಜ್ ಕೋರ್ಸ್’ ಅಗತ್ಯ: ಕೇಂದ್ರ ಸರಕಾರ

ಹೊಸದಿಲ್ಲಿ, ಫೆ.11: ದೇಶದಲ್ಲಿ ವೈದ್ಯರ ತೀವ್ರ ಕೊರತೆಯಿದ್ದು ಇದನ್ನು ನೀಗಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕರಡು ಮಸೂದೆಯಲ್ಲಿ ಆಯುಷ್ ವೈದ್ಯರೂ ಅಲೋಪಥಿ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಅವಕಾಶ ಮಾಡಿಕೊಡುವ ‘ಬ್ರಿಡ್ಜ್ ಕೋರ್ಸ್’(ಸೇತುಬಂಧ) ನಿಬಂಧನೆ ಅಳವಡಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ತನ್ನ ವೆಬ್‌ಸೈಟ್‌ನಲ್ಲಿರುವ ‘ಎಫ್‌ಎಕ್ಯೂ’ (ಆಗಿಂದಾಗ್ಗೆ ಕೇಳುವ ಪ್ರಶ್ನೆ) ವಿಭಾಗದಲ್ಲಿ ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದೆ. ಸೇತುಬಂಧವು ಅವೈಜ್ಞಾನಿಕ ಅಥವಾ ಅಪಾಯಕಾರಿಯಾಗಿರದು ಎಂದು ಸಚಿವಾಲಯ ಭರವಸೆ ನೀಡಿದೆ. ಎನ್‌ಎಂಸಿಯಲ್ಲಿ ಅಲೋಪಥಿ ವೈದ್ಯರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಇವರೆಲ್ಲಾ ಸರ್ವಾನುಮತದಿಂದ ಸೇತುಬಂಧ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದರೆ ಇದು ಅವೈಜ್ಞಾನಿಕ ಅಥವಾ ಅಪಾಯಕಾರಿ ಎಂದು ಭಾವಿಸಲು ಕಾರಣವೇ ಇರದ. ಇದರಲ್ಲಿ ಪಾಲ್ಗೊಳ್ಳುವವರು ಸೀಮಿತ ಔಷಧಿಗಳನ್ನು ಹೊಣೆಯರಿತ ರೀತಿಯಲ್ಲಿ ಸೂಚಿಸಲು ಸಾಧ್ಯವಾಗುವಂತೆ ಸೇತುಬಂಧ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ತರಬೇತಿ ಹೊಂದಿರುವ ಆಯುಷ್ ವೈದ್ಯರು ಸೇತುಬಂಧದ ಮೂಲಕ ತಮ್ಮ ಜ್ಞಾನಭಂಡಾರವನ್ನು ವೃದ್ಧಿಸಿಕೊಂಡು ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ಕಲಿಯುವ ಮೂಲಕ ಆರೋಗ್ಯಕ್ಷೇತ್ರದಲ್ಲಿ ಖಾಲಿಯಿರುವ ಸ್ಥಾನಗಳನ್ನು ತುಂಬುವ ಉದ್ದೇಶವನ್ನು ಎನ್‌ಎಂಸಿ ಮಸೂದೆ ಹೊಂದಿದೆ. ಸಂವಹನವಾಗದ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿರುವ ಕಾರಣ ಸಂಪೂರ್ಣ ನಿವಾರಣೆಯ ಚಿಕಿತ್ಸೆಯ ಅಗತ್ಯವಿದ್ದು ಸಮಗ್ರ ಪ್ರತಿಬಂಧಕ ಕ್ರಮ ಹಾಗೂ ಚಿಕಿತ್ಸೆಯನ್ನು ಒದಗಿಸುವ ಆಯುಷ್ ಪರಿಣಾಮಕಾರಿಯಾಗಿದೆ ಎಂದು ಇಲಾಖೆ ತಿಳಿಸಿದೆ.
ಅಲ್ಲದೆ 1,50,000 ಉಪ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಚಿಕಿತ್ಸಾ ಕೇಂದ್ರಗಳಾಗಿ ಅಭಿವೃದ್ಧಿಗೊಳಿಸಲು ಸರಕಾರ ಮುಂದಾಗಿದ್ದು, ಇದಕ್ಕೆ ಅಪಾರ ಪ್ರಮಾಣದಲ್ಲಿ ಮಾನವ ಸಂಪನ್ಮೂಲದ ಅಗತ್ಯವಿದೆ. ಥಾಯ್ಲೆಂಡ್, ಮೊಝಾಂಭಿಕ್, ಚೀನಾ, ಅಮೆರಿಕ ಮುಂತಾದ ದೇಶಗಳಲ್ಲಿ ಮುಖ್ಯವಾಹಿನಿಯ ಆರೋಗ್ಯಕ್ಷೇತ್ರದಲ್ಲಿ ವ್ಯವಸ್ಥಿತ ಸಮುದಾಯ ಆರೋಗ್ಯ ಕಾರ್ಯಕರ್ತರು ಹಾಗೂ ಅಲೋಪಥಿಯಲ್ಲದ ಚಿಕಿತ್ಸೆ ನೀಡುವವರಿದ್ದು ಈ ವ್ಯವಸ್ಥೆ ಪರಿಣಾಮಕಾರಿಯಾಗಿದೆ . ಜತೆಗೆ, ಮಹಾರಾಷ್ಟ್ರ, ಅಸ್ಸಾಂ, ಉತ್ತರಾಖಂಡ, ಹರ್ಯಾಣ, ಕರ್ನಾಟಕ, ಉ.ಪ್ರದೇಶ ಮುಂತಾದ ರಾಜ್ಯಗಳು ಈಗಾಗಲೇ ಕಾನೂನನ್ನು ತಿದ್ದುಪಡಿಗೊಳಿಸಿ ಆಯುಷ್ ವೈದ್ಯರಿಗೂ ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಲು ಅವಕಾಶ ಮಾಡಿಕೊಟ್ಟಿವೆ. ವೈದ್ಯರ ತೀವ್ರ ಕೊರತೆಯಿದ್ದಾಗ ಇಂತಹ ಕ್ರಮಗಳ ಅಗತ್ಯವಿದೆ ಎಂದು ಇಲಾಖೆ ತಿಳಿಸಿದೆ.
ಮಸೂದೆಯಲ್ಲಿರುವ ವಿವಿಧ ನಿಬಂಧನೆಗಳ ಬಗ್ಗೆ ವೈದ್ಯಕೀಯ ಸಂಸ್ಥೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿದೆ.ಆಯುಷ್ ಚಿಕಿತ್ಸಾ ಪದ್ಧತಿಯನ್ನು ಆಧುನಿಕ ವೈದ್ಯಪದ್ಧತಿಯ ಜೊತೆ ಜೋಡಿಸುವುದರಿಂದ ರೋಗಿಯ ಸುರಕ್ಷತೆಗೆ ತೊಂದರೆಯಾಗಲಿದೆ ಎಂದು ವೈದ್ಯಕೀಯ ಸಂಘಟನೆಗಳು ವಿರೋಧ ಸೂಚಿಸಿವೆ.
ಬಾಕ್ಸ್:
ಭಾರತದಲ್ಲಿ ವೈದ್ಯರ ಕೊರತೆ ವಿಶ್ವ ಆರೋಗ್ಯ ಸಂಸ್ಥೆಯು 1:1000 (ಸಾವಿರ ವ್ಯಕ್ತಿಗಳಿಗೆ ಒಬ್ಬ ವೈದ್ಯ) ಪ್ರಮಾಣವನ್ನು ಸೂಚಿಸಿದೆ. ಆದರೆ ಭಾರತದಲ್ಲಿ ಈಗ 1: 1655 ಪ್ರಮಾಣವಿದೆ. ನಗರದ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಬಯಸದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ದೇಶದಲ್ಲಿ 7,71,468 ಆಯುಷ್ ವೈದ್ಯರಿದ್ದು ಇವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.







