ವೀರಶೈವ ಲಿಂಗಾಯತರಲ್ಲಿ ಪ್ರತ್ಯೇಕವಿಲ್ಲ : ಬಿ.ಎಸ್.ಪರಮಶಿವಯ್ಯ
ಬೆಂಗಳೂರು, ಫೆ. 11: ವೀರಶೈವರು ಹಾಗೂ ಲಿಂಗಾಯತರು ಲಿಂಗ ಧರಿಸುತ್ತಾರೆ. ಹೀಗಾಗಿ, ವೀರಶೈವರು ಮತ್ತು ಲಿಂಗಾಯತರಲ್ಲಿ ಪ್ರತ್ಯೇಕತೆ ಎಂಬುದಿಲ್ಲ, ಎರಡು ಒಂದೆ ಎಂದು ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಹೇಳಿದ್ದಾರೆ.
ರವಿವಾರ ವೀರಶೈವ ಮಹಾಸಭಾ ವತಿಯಿಂದ ಶರಣ ಸೇವಾ ಸಮಾಜದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸರಕಾರ ವೀರಶೈವ ಲಿಂಗಾಯತ ಧರ್ಮವನ್ನು ಒಡೆದು ಇಬ್ಬಾಗ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜಕಾರಣಿಗಳು ಅಧಿಕಾರಕ್ಕಾಗಿ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ದುರಂತ ಎಂದ ಅವರು, ಪ್ರತಿಭೆಗೆ ಯಾವುದೇ ಬೇಧವಿಲ್ಲ. ಹೀಗಾಗಿ ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಕೆಲವರಲ್ಲಿ ಸುಪ್ತವಾಗಿರುತ್ತದೆ. ಅದನ್ನು ನಾವು ಹೊರ ತರಬೇಕಿದೆ.
ನಾವು ನಮ್ಮ ಜಾತಿಯವರನ್ನು ಬೆಳೆಸುತ್ತಿಲ್ಲ. ಸಿದ್ಧಲಿಂಗ ಮಠದಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ನಮ್ಮವರು ಶೇ.10ರಷ್ಟು ಮಾತ್ರ ಇದ್ದಾರೆ. ಎಲ್ಲ್ಲ ಸಮಾಜವನ್ನು ಪ್ರೀತಿಸಬೇಕು. ಆ ಕೆಲಸವನ್ನು ನಮ್ಮ ಸಮಾಜ ಮಾಡುತ್ತಿದೆ. ಇಂದಿನ ಮಕ್ಕಳು ಯಾವುದೇ ಕಾರಣಕ್ಕೂ ಭ್ರಷ್ಟರಾಗಬಾರದು. ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ 280 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಂತಮುನಿ ಸ್ವಾಮಿ, ವಾಗೀಶ್ ಪ್ರಸಾದ್, ನಟರಾಜ್, ಡಾ.ಗಿರೀಶ್ ನಾಶಿ, ಜಿ.ಆರ್.ಚೆನ್ನಪ್ಪ, ಕೇಶವ ಕುಮಾರ್, ಸಿದ್ದೇಶ್ ಉಪಸ್ಥಿತರಿದ್ದರು.







