ಜನಪದ ಸಾಹಿತ್ಯದಲ್ಲಿ ಪ್ರಜಾಪ್ರಭುತ್ವದ ಆಶಯ: ಡಾ.ಕೆ.ಚಿನ್ನಪ್ಪಗೌಡ

ಬೆಂಗಳೂರು, ಫೆ. 11: ಜನಪದ ಸಾಹಿತ್ಯವು ಹುಲುಸಾಗಿದ್ದು, ಪರಂಪರೆಯಿಂದಲೂ ಜನಪದರು ಮೌಖಿಕವಾಗಿ ಕಾಪಿಟ್ಟುಕೊಂಡು ಬಂದಿದ್ದಾರೆ. ಇದರಲ್ಲಿ ಮಾನವೀಯತೆ ಸೆಲೆಯಿದ್ದು, ಇಂದಿನ ಪ್ರಜಾಪ್ರಭುತ್ವದ ಆಶಯಗಳನ್ನು ಕಾಣಬಹುದಾಗಿದೆ ಎಂದು ಜಾನಪದ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದ್ದಾರೆ.
ರವಿವಾರ ಕಸಾಪದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನೀಡುವ ‘ಕಾವ್ಯಾನಂದ ಪುರಸ್ಕಾರ ಪ್ರಶಸ್ತಿ’ಯನ್ನು ಜಾನಪದ ವಿದ್ವಾಂಸ ಡಾ.ಹಿ.ಚಿ. ಬೋರಲಿಂಗಯ್ಯ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಜನಪದ ಸಾಹಿತ್ಯದಲ್ಲಿ ಹಲವು ಜೀವನ ಕ್ರಮಗಳು, ವೈವಿಧ್ಯಮಯವಾದ ಬದುಕು, ವೈವಿಧ್ಯವಾದ ಪ್ರಾದೇಶಿಕತೆಯನ್ನು ನಮ್ಮ ಜನಪದರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.
ಇಂದು ಏಕರೂಪಿ ಸಂಸ್ಕೃತಿಯು ನಿರ್ಮಾಣಗೊಳ್ಳುತ್ತಿರುವುದು ಜನಪದ ಸಾಹಿತ್ಯಕ್ಕೆ ಮಾರಕವೆಂದು ಆತಂಕ ವ್ಯಕ್ತಪಡಿಸಿದರು. ವಿಶ್ವದಲ್ಲಿ ಹೆಣ್ಣನ್ನು ನಾಯಕನನ್ನಾಗಿ ಮಾಡಿಕೊಂಡು ರಚಿತವಾದ ಸಿರಿಪಾಡ್ದನ ಮಹಾಕಾವ್ಯವು ಈ ನೆಲದ್ದೆ ಎಂಬುದು ಅಭಿಮಾನದ ಸಂಗತಿಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೋರಲಿಂಗಯ್ಯನವರು ತಮ್ಮ ದೇಸಿ ಪರಂಪರೆ ಕೃತಿಯಲ್ಲಿ ಜಾನಪದದ ಬಹುತ್ವವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಪ್ರಶಸ್ತಿ ಪುರಸ್ಕೃತ ಬೋರಲಿಂಗಯ್ಯನವರ ದೇಸಿ ಪರಂಪರೆ ಕೃತಿಯನ್ನು ಪರಿಚಯ ಮಾಡಿಕೊಟ್ಟ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರರು ತುಳಿನ ಶಂಗಂ ಕಾಲಕ್ಕಿಂತಲೂ ಪ್ರಾಚೀನವಾಗಿ ನಮ್ಮ ಜನಪದ ಸಾಹಿತ್ಯದ್ದು, ತಮಿಳಿನ ಕಾವ್ಯಗಳಲ್ಲಿ ಕನ್ನಡ ಜನಪದ ಸಾಹಿತ್ಯ ಅಡಕವಾಗಿರುವುದನ್ನು ಬೋರಲಿಂಗಯ್ಯನವರು ತಮ್ಮ ಕೃತಿಯಲ್ಲಿ ಆಕರಸಹಿತವಾಗಿ ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಡಾ.ಹಿ.ಚಿ.ಬೋರಲಿಂಗಯ್ಯ, ಲತಾ ಪುರಾಣಿಕ, ಪ್ರಸನ್ನಕುಮಾರ ಪುರಾಣಿಕ, ವಿಜಯಾನಂದೀಶ್ವರ, ಡಾ.ಚಕ್ಕೆರೆ ಶಿವಶಂಕರ್, ಪ್ರೊ.ಎಂ.ಎಚ್.ಕೃಷ್ಣಯ್ಯ, ಪ್ರೊ.ಅ.ರಾ.ಮಿತ್ರ, ಭಾರತಿ ಮೃತ್ಯುಂಜಯ ಉಪಸ್ಥಿತರಿದ್ದರು







