ಜ್ಞಾನಧಾರಾ ನರ್ಸರಿ ಶಾಲೆಯ ಮೊದಲನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ

ಸುಂಟಿಕೊಪ್ಪ,ಫೆ.11: ಮಕ್ಕಳನ್ನು ಆದಷ್ಟು ಮೊಬೈಲ್ ಮತ್ತು ಟಿವಿಯಿಂದ ದೂರವಿಡಿ ಎಂದು ಕೊಡಗರಹಳ್ಳಿ ಶಾಂತಿನಿಕೇತನ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಮೇರಿ ಫಾತಿಮಾ ಹೇಳಿದರು.
ಜ್ಞಾನಧಾರಾ ನರ್ಸರಿ ಶಾಲೆಯ ಮೊದಲನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾದ್ಯ. ಅದರ ಬದಲಾಗಿ ಮಕ್ಕಳ ಮುಂದೆ ಅನಾವಶ್ಯವಾಗಿ ಜಗಳವಾಡುವುದು, ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುವುದರಿಂದ ಮಕ್ಕಳಿಗೆ ತಮ್ಮ ಪೋಷಕರ ಮೇಲಿದ್ದ ಪ್ರೀತಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದರು.
ಮಕ್ಕಳು ಮಾಡುತ್ತಿರುವ ತಪ್ಪುಗಳನ್ನು ಈಗಿನಿಂದಲೇ ತಿದ್ದುತ್ತಾ ಹೋದಲ್ಲಿ ಆ ಮಗುವು ಮುಂದೆ ಉತ್ತಮ ಶ್ರದ್ಧೆ, ಗೌರವವನ್ನು ನೀಡುವ ನಾಗರಿಕನಾಗಿ ಮುಂದೆ ಬರುತ್ತಾನೆ. ಒಟ್ಟಾರೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಈಶ ಮಾತನಾಡಿ, ಮಗುವಿನ ಮನಸ್ಸು ಹಸಿ ಕಾಂಕ್ರಿಟ್ ಇದ್ದ ಹಾಗೆ, ಆ ಮನಸ್ಸನ್ನು ಈಗಿನಿಂದಲೇ ತಿಳಿಗೊಳಿಸಿದರೆ ಮಕ್ಕಳಲ್ಲಿ ಯಾವುದೇ ಕೆಟ್ಟ ಭಾವನೆಗಳು ಮೂಡುವುದಿಲ್ಲ. ಮನೆಯ ಪರಿಸರದ ನಡುವೆ ಪೋಷಕರು ನಡೆದುಕೊಳ್ಳುವ ರೀತಿಯ ಮೇಲೆ ಮಗುವಿನ ಭವಿಷ್ಯ ರೂಪಿತವಾಗಿರುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನಧಾರಾ ನರ್ಸರಿ ಶಾಲಾ ಟ್ರಸ್ಟಿನ ಅಧ್ಯಕ್ಷೆ ಲೀಲಾ ಮೇದಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಸೋಮಚಂದ್ರ, ವಿಎಸ್‍ಎಸ್‍ಎನ್ ಬ್ಯಾಂಕಿನ ಅಧ್ಯಕ್ಷ ಎನ್.ಸಿ.ಪೊನ್ನಪ್ಪ, ಶಾರದಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.







