ಕಾರ್ಕಳ ಕ್ಷೇತ್ರಕ್ಕೆ ಹರ್ಷ ಮೊಲಿ ಸಹಿತ ಮೂವರು ಆಕಾಂಕ್ಷಿಗಳ ಹೆಸರು: ಉಗ್ರಪ್ಪ
ಉಡುಪಿ, ಫೆ.11: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳ ಹೊರತು ಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಒಮ್ಮತ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲಾಗಿದ್ದು, ಕಾರ್ಕಳಕ್ಕೆ ಮೂವರು ಆಕಾಂಕ್ಷಿಗಳ ಹೆಸರುಗಳನ್ನು ನೀಡಲಾಗಿದೆಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಪ್ರಮುಖರ ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ವರದಿ ಸಲ್ಲಿಸಲು ಕೆಪಿಸಿಸಿ ನಮ್ಮನ್ನು ವೀಕ್ಷಕರಾಗಿ ನೇಮಕ ಮಾಡಿದ್ದು, ಅದರಂತೆ ಪಕ್ಷದ ಪ್ರಮುಖರ ಅಭಿಪ್ರಾಯ ವನ್ನು ಪಡೆಯಲಾಗಿದೆ ಎಂದರು.
ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್, ಕಾಪುವಿನಲ್ಲಿ ವಿನಯ ಕುಮಾರ್ ಸೊರಕೆ, ಕುಂದಾಪುರದಲ್ಲಿ ರಾಕೇಶ್ ಮಲ್ಲಿ, ಬೈಂದೂರಿನಲ್ಲಿ ಗೋಪಾಲ ಪೂಜಾರಿ ಹೆಸರುಗಳನ್ನು ಒಮ್ಮತದಿಂದ ಸೂಚಿಸಲಾಗಿದೆ. ಆದರೆ ಕಾರ್ಕಳ ಕ್ಷೇತ್ರಕ್ಕೆ ಗೋಪಾಲ ಭಂಡಾರಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ಹರ್ಷ ಮೊಲಿಯ ಹೆಸರುಗಳನ್ನು ಸೂಚಿಸಲಾಗಿದೆ. ಈ ಹೆಸರುಗಳನ್ನು ಪಕ್ಷಕ್ಕೆ ಶಿಫಾರಸ್ಸು ಮಾಡಲಾಗುವುದು. ಅಂತಿಮವಾಗಿ ಅಭ್ಯರ್ಥಿಯನ್ನು ಪಕ್ಷದ ಹೈ ಕಮಾಂಡ್ ಆಯ್ಕೆ ಮಾಡಲಿದೆ ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಪರವಾದ ಅಲೆಗಳು ಎಲ್ಲ ಕಡೆಗಳಲ್ಲಿ ಇದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಈ ಬಾರಿಯ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್, ಸಾಮಾಜಿಕ ನ್ಯಾಯ ಮತ್ತು ಮತೀಯ ಶಕ್ತಿಯ ಮಧ್ಯೆ ನಡೆಯುವ ಸಂಘರ್ಷವಾಗಿದೆ. ಇಂದು ಬಿಜೆಪಿ ಮುಖಂಡರು ಹಾಗೂ ಮೋದಿ ಮತ್ತು ಅಮಿತ್ ಶಾ ಹತಾಶರಾಗಿ ರಾಜ್ಯ ಸರಕಾರದ ವಿರುದ್ಧ ಸುಳ್ಳುಗಳ ಸರಮಾಲೆಯನ್ನು ಸೃಷ್ಠಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜನರಿಗೆ ಕೊಟ್ಟ ಮಾತನ್ನು ಈಡೇರಿಸದ ಮೋದಿ ರಾಜ್ಯ ಚುನಾವಣೆಯಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದ್ದಾರೆ. ಇದು ಬಿಜೆಪಿಯ ನಾಯಕತ್ವ ದಿವಾಳಿತನಕ್ಕೆ ದೊಡ್ಡ ಉದಾ ಹರಣೆಯಾಗಿದೆ ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಕ್ಷಯ, ಮಮತಾ ಗಟ್ಟಿ, ಶೈಲಾ ಪುಟ್ಟಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ನರಸಿಂಹ ಮೂರ್ತಿ, ಶಂಕರ್ ಕುಂದರ್ ಉಪಸ್ಥಿತರಿದ್ದರು.
ಬಿಜೆಪಿಯವರು ಡೋಂಗಿ ಹಿಂದುಗಳು
ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ, ಧರ್ಮ ಎಂಬುದು ಅವರವರ ವೈಯಕ್ತಿಕ ವಿಚಾರವಾಗಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ಸಿಗರು ನಿಜವಾದ ಹಿಂದುಗಳು. ಆದರೆ ಬಿಜೆಪಿಯವರು ಡೋಂಗಿ ಹಿಂದುಗಳು. ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಮತ ಗಳಿಸುವಂತಹ ಸಣ್ಣತನದ ರಾಜಕಾರಣವನ್ನು ನಾವು ಮಾಡಲ್ಲ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.







