ರಂಗಭೂಮಿಯಲ್ಲಿ ಅಂತರ ಸೃಷ್ಠಿ: ಪ್ರಕಾಶ್ ಬೆಳವಾಡಿ
ಸುಮನಸಾ ‘ರಂಗಹಬ್ಬ’ ನಾಟಕೋತ್ಸವ ಉದ್ಘಾಟನೆ

ಉಡುಪಿ, ಫೆ.11: ಇಂದು ರಂಗಭೂಮಿಯಲ್ಲಿ ನೈಜತೆ ಹಾಗೂ ಆಧುನಿಕತೆ ಹೆಸರಿನಲ್ಲಿ ಸಂಘರ್ಷ ಹುಟ್ಟಿಕೊಂಡು ಅಂತರ ಸೃಷ್ಟಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವೈವಿಧ್ಯಮಯವನ್ನು ಸಂಭ್ರಮಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ರಂಗ ನಟ, ನಿರ್ದೇಶಕ ಪ್ರಕಾಶ ಬೆಳವಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಸುಮನಸಾ ಕೊಡವೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಪೇಜಾವರ ಮಠದ ಸಹಯೋಗದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾದ ಏಳು ದಿನಗಳ ‘ರಂಗಹಬ್ಬ’ ನಾಟ ಕೋತ್ಸವವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸತ್ಯದ ದರ್ಶನ ನೀಡುವ ರಂಗಭೂಮಿಯನ್ನು ಜೀವಂತವಾಗಿ ಇಡಬೇಕಾ ಗಿದೆ. ಬದುಕಿನ ಸುಖ, ದುಃಖದ ಅನುಭವವನ್ನು ಸಹೃದಯಿಗಳಿಗೆ ಕಟ್ಟಿಕೊಡ ಬೇಕಾದರೆ ನಾವು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ಇದರಲ್ಲಿ ವೈಮನಸ್ಸು ಸೃಷ್ಟಿಯಾಗಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸುಧಾ ಮಣೂರು ಕೋಟ ಅವರಿಗೆ ರಂಗಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್.ಶೆಟ್ಟಿ, ರವೀಂದ್ರ ಪೂಜಾರಿ, ಸುಮನಸಾ ಕೊಡವೂರಿನ ಸಂಚಾಲಕ ಭಾಸ್ಕರ್ ಪಾಲನ್, ಗೌರವಾಧ್ಯಕ್ಷ ಎಂ.ಎಸ್.ಭಟ್, ಹಿರಿಯ ರಂಗಕರ್ಮಿ ಕೆ.ಬಿ. ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಕ್ಷತ್ ವಂದಿಸಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೆಂಗಳೂರು ತಕ್ಷ್ ಥಿಯೆಟ್ರಿಕ್ಸ್ ತಂಡದಿಂದ ‘ಥ್ರೀ ರೋಸಸ್’ ನಾಟಕ ಪ್ರದರ್ಶನಗೊಂಡಿತು.







