ಹರಪನಹಳ್ಳಿ : ಅಪ್ರಾಪ್ತ ಬಾಲಕಿಯ ವಿವಾಹ ತಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಹರಪನಹಳ್ಳಿ,ಫೆ.11: ಅಪ್ರಾಪ್ತ ಬಾಲಕಿಯ ವಿವಾಹ ತಡೆದು, ಪೋಷಕರಿಂದ 18 ವಯಸ್ಸು ತುಂಬುವವರೆಗೂ ವಿವಾಹ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡ ಘಟನೆ ತಾಲೂಕಿನ ಶೃಂಗಾರತೋಟ ಗ್ರಾಮದಲ್ಲಿ ರವಿವಾರ ನಡೆದಿದೆ.
ಗ್ರಾಮದ ಇಟ್ಟಿಗಿ ಮಂಜುಳಾ ಹಾಲೇಶಪ್ಪ ಎಂಬುವವರ ಪುತ್ರ ಹಾಗೂ ಹಗರಿಬೊಮ್ಮಮಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಗುಂಡಣ್ಣನವರ ಹನುಮಂತಪ್ಪ ಪಕ್ಕೀರವ್ವ ಇವರ ಮಗಳಿಗೆ ವಿವಾಹ ನಿಗದಿಗೊಳಿಸಿತ್ತು. ಈ ಮದುವೆಗೆ ಎಲ್ಲಾ ಸಿದ್ದತೆ ಮಾಡಿಕೊಂಡು ಫೆ. 11ರಂದು ಶೃಂಗಾರತೋಟ ಗ್ರಾಮದ ವರನ ಸಗೃಹದಲ್ಲಿ ಬೆಳಿಗ್ಗೆ 11.30 ರಂದು 12.40ರವರೆಗೆ ಮಹೂರ್ತದಲ್ಲಿ ವಿವಾಹ ನಡೆಸಲು ತೀರ್ಮಾನಿಸಿದ್ದಾರೆ. ಆದರೆ, ಹುಡುಗಿಗೆ ಕೇವಲ 17 ವರ್ಷ ಆಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಹಸೀಲ್ದಾರ ಕೆ. ಗುರುಬಸವರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆಯ ಅಡಿ ವಿವಾಹ ನಡೆಯುವುದನ್ನು ತಪ್ಪಿಸಿ, ವಯಸ್ಸು ಪೂರ್ಣಗೊಳ್ಳುವವರೆಗೂ ವಿವಾಹ ಮಾಡುವುದಿಲ್ಲವೆಂದು ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತಸ್ವಾಮಿ, ಎಎಸ್‍ಐ ರುದ್ರಪ್ಪ, ಸಿದ್ದಣ್ಣ, ಮೇಲ್ವಿಚಾರಕಿ ಹೇಮಾ ಗುಡುಗುಂಟಿ ಮತ್ತಿತರರು ಇದ್ದರು.





