ಅನೈತಿಕ ಸಂಬಂಧ ರುಜುವಾತುಪಡಿಸಿದರೆ ರಾಜಕೀಯ ಸನ್ಯಾಸ: ಶಾಸಕ ಮೊಯ್ದಿನ್ ಬಾವ

ಮಂಗಳೂರು, ಫೆ.12: ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಇತ್ತೀಚೆಗೆ ಕಾರ್ಕಳದಲ್ಲಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಮತ್ತು ಪ್ರತಿಭಾರ ಮಧ್ಯೆ ಅನೈತಿಕ ಸಂಬಂಧ ಕಲ್ಪಿಸುವ ಸಂದೇಶಗಳನ್ನು ಹರಿದು ಬಿಡಲಾಗುತ್ತದೆ. ಇಂತಹ ಸಂಬಂಧವನ್ನು ರುಜುವಾತುಪಡಿಸಿದರೆ ತಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವ ಹೇಳಿದ್ದಾರೆ.
ಸೋಮವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಪ್ರತಿಭಾ ಕುಳಾಯಿಯ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಆಕೆ ಸತ್ಯ ಸಂಗತಿ ಯನ್ನಷ್ಟೇ ಹೇಳಿದ್ದಾರೆ. ಹಾಗಂತ ಆಕೆಯನ್ನು ಅತ್ಯಂತ ಕೀಳಾಗಿ, ತುಚ್ಛ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ. ಆಕೆಯನ್ನು ಟೀಕಿಸುವ ಭರಾಟೆಯಲ್ಲಿ ನಮ್ಮಳಗೆ ಸಂಬಂಧವಿದೆ ಎಂದು ಆರೋಪಿಸಲಾಗುತ್ತದೆ. ಇದು ಖಂಡನೀಯ. ಸಹೋದರಿ ಸಮಾನಳಾದ ಪ್ರತಿಭಾರನ್ನು ನಿಂದಿಸುವವರು ಸ್ವತ: ತಮ್ಮ ಸಹೋದರಿಯರ ಜೊತೆ ಅಂತಹ ಸಂಬಂಧ ಇಟ್ಟುಕೊಂಡಿರಬಹುದು ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಮುಹಮ್ಮದ್ ಕುಂಜತ್ತಬೈಲ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ತಾಪಂ ಸದಸ್ಯ ಅಬ್ದುಸ್ಸಮದ್, ಮಾಜಿ ಜಿಪಂ ಸದಸ್ಯ ಕೃಷ್ಣ ಅಮೀನ್, ಮಾಜಿ ಕಾರ್ಪೊರೇಟರ್ ಶಾಲಿನಿ, ಪಕ್ಷದ ಮುಖಂಡ ಹಿರಣ್ಯಾಕ್ಷ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.





